ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿಗೆ ಹೋಗಿ ಬರುತ್ತೇವೆ ಎಂದು ಹೇಳಿ ಇಡೀ ಕುಟುಂಬವೇ ನಾಪತ್ತೆಯಾಗಿರುವ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ.
ನಾಲ್ಕು ಜನರ ಕುಟುಂಬವೊಂದು ನಾವು ಬೆಂಗಳೂರಿಗೆ ಹೋಗಿ ಬರ್ತೀವಿ ಎಂದು ಹೇಳಿ ಹೊರಟಿದ್ದು, ಈವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ.
ದಾವಣಗೆರೆ ನಗರದ ಬನಶಂಕರಿ ಬಡಾವಣೆಯಲ್ಲಿ ವಾಸವಾಗಿದ್ದ ರಮೇಶ್ ಕುಮಾರ್ (38), ಅವರ ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣ (3) ನಾಪತ್ತೆಯಾದವರು. ಮೂಲತಃ ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದವರಾದ ರಮೇಶ್ ಕುಮಾರ್ ಷೇರು ಮಾರುಕಟ್ಟೆ ಹೂಡಿಕೆ ವ್ಯವಹಾರ ಮಾಡಿಕೊಂಡು ಕುಟುಂಬದ ಜತೆ ದಾವಣಗೆರೆಯಲ್ಲಿ ನೆಲೆಸಿದ್ದರು.
ರಮೇಶ್ ಕುಮಾರ್ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟವಾಗಿತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕುಟುಂಬ ಸಮೇತ ಮನೆ ಬಿಟ್ಟು ಹೋಗಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಆಗಸ್ಟ್ 14ರಂದು ಪೋಷಕರಿಗೆ ಕರೆ ಮಾಡಿ ಕೆಲಸವಿದೆ ಎಂದು ಹೇಳಿ ಬೆಂಗಳೂರಿಗೆ ಹೋಗಿದ್ದಾರೆ. ಅದಾದ ನಂತರ ಅವರ ಸುಳಿವು ಇಲ್ಲ. ಪೋಷಕರು ಗಾಬರಿಯಿಂದ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಸ್ವಂತ ಕಾರು, ಬೈಕ್ ಎಲ್ಲವನ್ನೂ ಮನೆಯಲ್ಲಿಯೇ ನಿಲ್ಲಿಸಿ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.



