August 21, 2026
Friday, August 21, 2026
spot_img

ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ಪಾಕ್ ಮಾಜಿ ಪ್ರಧಾನಿ ಶಿಫ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಮಾಜಿ ಪ್ರಧಾನಿ, ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಗೆ ಶುಕ್ರವಾರ ಬೆಳಗಿನ ಜಾವ ಇಸ್ಲಾಮಾಬಾದ್‌ನ ಶಿಫಾ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಟಿಐ ನಾಯಕ ಜುಲ್ಫಿ ಬುಖಾರಿ ಸ್ಪಷ್ಟಪಡಿಸಿದ್ದಾರೆ. ಖಾನ್ ಆರೋಗ್ಯ ತಪಾಸಣೆ ಪೂರ್ಣಗೊಂಡ ಕೆಲವೇ ಗಂಟೆಗಳಲ್ಲಿ ಮತ್ತೆ ರಾವಲ್ಪಿಂಡಿಯ ಅಡಿಯಾಲ ಜೈಲಿಗೆ ವಾಪಸ್ ಕರೆತರಲಾಗಿದೆ.

ಸರ್ಕಾರದ ವಿರೋಧ ಮತ್ತು ಕಾನೂನು ಹೋರಾಟ

ಖಾಸಗಿ ಆಸ್ಪತ್ರೆಯಲ್ಲಿ ಖಾನ್ ಗೆ ಚಿಕಿತ್ಸೆ ನೀಡುವುದನ್ನು ಪಾಕಿಸ್ತಾನ ಸರ್ಕಾರ ತೀವ್ರವಾಗಿ ವಿರೋಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರ ರಾಜಕೀಯ ಸಲಹೆಗಾರ ರಾಣಾ ಸನಾವುಲ್ಲಾ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಕಾನೂನುಬಾಹಿರ ಎಂದು ವಾದಿಸಿದ್ದು, ಈ ಆದೇಶದಲ್ಲಿ ತಿದ್ದುಪಡಿ ತರಲು ಸುಪ್ರೀಂ ಕೋರ್ಟ್‌ನಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ ಎಂದಿದ್ದಾರೆ.

ಈ ನಡುವೆ ಪಿಟಿಐ ಪ್ರಧಾನ ಕಾರ್ಯದರ್ಶಿ ಸಲ್ಮಾನ್ ಅಕ್ರಮ್ ರಾಜಾ, ಖಾನ್ ಜೀವಕ್ಕೆ ಜೈಲಿನಲ್ಲಿ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದು, ಅರ್ಜಿ ಹಿಂಪಡೆದು ಆಸ್ಪತ್ರೆಯಲ್ಲೇ ಸೂಕ್ತ ಚಿಕಿತ್ಸೆ ಮುಂದುವರಿಸಲು ಒತ್ತಾಯಿಸಿದ್ದಾರೆ.

ವದಂತಿಗಳಿಗೆ ಅಂತ್ಯ ಮತ್ತು ಬೆಂಬಲಿಗರ ಸಮಾಧಾನ

ಜೈಲಿನಲ್ಲಿ ಇಮ್ರಾನ್ ಖಾನ್ ಆರೋಗ್ಯ ತೀವ್ರವಾಗಿ ಕ್ಷೀಣಿಸಿದೆ ಹಾಗೂ ಖಾನ್ ಸಾವನ್ನಪ್ಪಿರುವ ವದಂತಿಗಳು ಹರಡಿದ್ದವು. ಆದರೆ, ಖಾನ್ ಆಸ್ಪತ್ರೆಗೆ ಆಗಮಿಸಿದ ದೃಶ್ಯಗಳನ್ನು ಕಂಡ ಬೆಂಬಲಿಗರು ಮತ್ತು ಸಾರ್ವಜನಿಕರು ಸಮಾಧಾನಗೊಂಡಿದ್ದಾರೆ. 2018 ರಿಂದ 2022 ರವರೆಗೆ ಪ್ರಧಾನಿಯಾಗಿದ್ದ ಖಾನ್, 2023 ರಿಂದ ಜೈಲಿನಲ್ಲಿದ್ದರೂ ಇನ್ನೂ ಜನಪ್ರಿಯತೆ ಕುಂದಿಸಿಕೊಂಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !