ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದಲ್ಲಿ ಮಿಲಿಟರಿ ಕಾರ್ಯಾಚರಣೆ ಮುಕ್ತಾಯದ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ, ಇರಾನ್ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇರಾನ್ ಜೊತೆಗಿನ ಸಂಘರ್ಷ ತಕ್ಷಣವೇ ನಿಲ್ಲಬೇಕಾದರೆ ಅಮೆರಿಕಾವು ತಮ್ಮ ಏಳು ಕಠಿಣ ಷರತ್ತುಗಳಿಗೆ ಶರಣಾಗಬೇಕು ಎಂದು ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ನ ಪ್ರಭಾವಿ ಕಾರ್ಯದರ್ಶಿ ಮೇಜರ್ ಜನರಲ್ಮೊಹ್ಸೆನ್ ರೆಜಾಯಿ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.
ಇರಾನ್ ವಿಧಿಸಿದ 7 ಕಠಿಣ ಷರತ್ತುಗಳು
ಅಮೆರಿಕ ಸರ್ಕಾರವು ಇರಾನ್ ವಿರುದ್ಧದ ಯುದ್ಧದಿಂದಾಗಿ ಆಂತರಿಕವಾಗಿ ತತ್ತರಿಸಿದೆ ಎಂದು ರೆಜಾಯಿ ಹೇಳಿದ್ದಾರೆ. “ಅಮೆರಿಕವು ಸದ್ಯ ಹತಾಶ ಜೂಜುಕೋರನಂತೆ ಒದ್ದಾಡುತ್ತಿದೆ. ಕಾಲ್ಪನಿಕ ಮಾತುಕತೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ. ಪಶ್ಚಿಮ ಏಷ್ಯಾದ ಹೊಸ ಜಾಗತಿಕ ವ್ಯವಸ್ಥೆಯನ್ನು ನಿರಾಕರಿಸಬೇಡಿ” ಎಂದಿರುವ ಅವರು ತಕ್ಷಣವೇ ಜಾರಿಗೆ ಬರುವಂತೆ ಏಳು ಷರತ್ತುಗಳನ್ನು ಮುಂದಿಟ್ಟಿದ್ದಾರೆ.
https://twitter.com/ferozwala/status/2119931261540356486/photo/1
ಎಲ್ಲಾ ರಂಗಗಳಲ್ಲಿಯೂ ಇರಾನ್ ವಿರುದ್ಧದ ಹಗೆತನ ಹಾಗೂ ಮಿಲಿಟರಿ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು.
ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಹೇರಿರುವ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಬೇಕು.
ಜಲಸಂಧಿಯಲ್ಲಿನ ಪ್ರಮುಖ ಹಡಗು ಸಂಚಾರ ಮಾರ್ಗಗಳನ್ನು ತಕ್ಷಣವೇ ಪುನರಾರಂಭಿಸಬೇಕು.
ಇರಾನ್ ಮೇಲೆ ಹೇರಲಾಗಿರುವ ಎಲ್ಲಾ ಕಠಿಣ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.
ವಿದೇಶಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್ನ ಎಲ್ಲಾ ಹಣಕಾಸು ಆಸ್ತಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು.
ಇರಾನ್ ದೇಶದ ಆಂತರಿಕ ವಿಚಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಎಂಬ ಷರತ್ತುಗಳನ್ನು ಹಾಕಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ನಿಲುವು
ಇರಾನ್ನ ಈ ಬೇಡಿಕೆಗಳಿಗೂ ಮುನ್ನ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಇರಾನ್ ಜೊತೆಗಿನ ಮಿಲಿಟರಿ ಸಂಘರ್ಷವು ಸದ್ಯಕ್ಕೆ ಬಹುತೇಕ ಮುಕ್ತಾಯಗೊಂಡಿದೆ ಮತ್ತು ಇದು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆಯಿಲ್ಲ ಎಂದು ಹೇಳಿದ್ದರು. “ಇರಾನ್ ಈಗ ಸೋಲುತ್ತಿರುವ ದೇಶ. ಅವರು ನಮ್ಮೊಂದಿಗೆ ತುಂಬಾ ಮರ್ಯಾದೆಯಿಂದ ಮಾತನಾಡುತ್ತಿದ್ದಾರೆ. ಮಿಲಿಟರಿ ಕಾರ್ಯಾಚರಣೆ ಮುಗಿದರೆ ಜಗತ್ತಿನ ಜನರಿಗೆ ಹೆಚ್ಚಿನ ಸುರಕ್ಷತೆ ಸಿಗಲಿದೆ. ಆದರೆ, ಒಂದು ವೇಳೆ ನಾವು ಮತ್ತೆ ಯುದ್ಧಕ್ಕೆ ಇಳಿಯಬೇಕಾಗಿ ಬಂದರೆ, ನಮ್ಮ ಸೇನೆ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಟ್ರಂಪ್ ಎಚ್ಚರಿಸಿದ್ದರು.
‘ಆಪರೇಷನ್ ಐರನ್ ಗೇಟ್’
ಇದೇ ವೇಳೆ ಇರಾನ್ ಅನ್ನು ಕಟ್ಟಿಹಾಕಲು ಅಮೆರಿಕ ದೊಡ್ಡ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಟ್ರಂಪ್ ಅವರು ಕತಾರ್ ಪ್ರಧಾನಿ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ತಮ್ಮ ಟ್ರುತ್ ಸೋಶಿಯಲ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರವನ್ನು ಹೊಂದಲು ಬಿಡುವುದಿಲ್ಲ ಮತ್ತು ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ಇದಕ್ಕಾಗಿ ಕತಾರ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್ ಮತ್ತು ಕುವೈತ್ ಸೇರಿದಂತೆ ಗಲ್ಫ್ ಮಿತ್ರರಾಷ್ಟ್ರಗಳು ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಜಂಟಿ ಭೂ ಮತ್ತು ನೌಕಾ ದಿಗ್ಬಂಧನಕ್ಕೆ ಬೆಂಬಲ ಸೂಚಿಸಿದ್ದು, ಇದಕ್ಕೆ ‘ಆಪರೇಷನ್ ಐರನ್ ಗೇಟ್‘ ಎಂದು ಹೆಸರಿಡಲಾಗಿದೆ.



