August 21, 2026
Friday, August 21, 2026
spot_img

ಕೈದಿಗಳ ಪರಾರಿ ಪ್ರಕರಣ: ಎಸ್ಕೇಪ್ ಆಗಿದ್ದ ಮಸ್ತಾನ್‌ ಕೊನೆಗೂ ಅರೆಸ್ಟ್

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ತಲೆಮರೆಸಿಕೊಂಡಿದ್ದ ಕೊನೆಯ ಕೈದಿ ಮಸ್ತಾನ್ ಕಮಲಾಪುರೆ ಅಲಿಯಾಸ್ ಮಾಸೋನನ್ನು ಬೀದರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮಸ್ತಾನ್‌ನನ್ನು ವಶಕ್ಕೆ ಪಡೆಯಲಾಗಿದೆ. ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮಸ್ತಾನ್, ಇತ್ತೀಚೆಗೆ ಮತ್ತಿಬ್ಬರು ಕೈದಿಗಳೊಂದಿಗೆ ಸೇರಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದನು.

ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಹಲವು ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಮಸ್ತಾನ್‌ಗಾಗಿ ಕಲಬುರಗಿ ಹಾಗೂ ಬೀದರ್ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಇಸ್ಲಾಂಪುರ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಮಸ್ತಾನ್ ಬಂಧನದೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳನ್ನೂ ಪೊಲೀಸರು ಬಂಧಿಸಿದಂತಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ:

ಪರಾರಿಯಾಗಿದ್ದ ಮೂವರು ಕೈದಿಗಳು ಪೊಲೀಸರ ವಶಕ್ಕೆ

ಜುಲೈ 14ರಂದು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮಸ್ತಾನ್ ಕಮಲಾಪುರೆ, ಸಂತೋಷ ಹಾಗೂ ಸಾಗರ್ ಎಂಬ ಮೂವರು ಕೈದಿಗಳು ಪರಾರಿಯಾಗಿದ್ದರು. ಪರಾರಿಯಾದ ಕೆಲವೇ ಗಂಟೆಗಳಲ್ಲಿ ಸಾಗರ್‌ನನ್ನು ಬೀದರ್ ಜಿಲ್ಲೆಯ ಭಾಲ್ಕಿ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದರು.

ಬಳಿಕ ಮತ್ತೋರ್ವ ಕೈದಿ ಸಂತೋಷನನ್ನು ಹೂಮನಾಬಾದ್ ರಸ್ತೆಯ ಕಪನೂರು ಸಮೀಪ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಮಸ್ತಾನ್ ಮಾತ್ರ ಹಲವು ದಿನಗಳ ಕಾಲ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ.

ಇದೀಗ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಮಸ್ತಾನ್ ಬಂಧನವಾಗಿದ್ದು, ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳೂ ಮತ್ತೆ ಪೊಲೀಸರ ವಶಕ್ಕೆ ಬಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !