September 17, 2026
Thursday, September 17, 2026
spot_img

ದ್ವೇಷ ಭಾಷಣ ಹಿನ್ನೆಲೆ: ಎಸ್‌ಡಿಪಿಐ ಮುಖಂಡನ ವಿರುದ್ಧ ಎಫ್ಐಆರ್ ದಾಖಲು

ಹೊಸದಿಗಂತ ವರದಿ ಕಲಬುರಗಿ:

ಸಾರ್ವಜನಿಕವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ವಿರುದ್ಧ ದ್ವೇಷ ಬಿತ್ತುವ ಹಾಗೂ ಬೆದರಿಕೆ ಹಾಕುವ ರೀತಿಯಲ್ಲಿ ಭಾಷಣ ಮಾಡಿ, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಮುಖಂಡ ಸೈಯದ್ ಅಲೀಮ್ ಇಲಾಹಿ ವಿರುದ್ಧ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 25ರಂದು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಯಂಗ್ ಡೆಮಾಕ್ರಾಟ್ಸ್ ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸೈಯದ್ ಅಲೀಮ್ ಇಲಾಹಿ ಸಾರ್ವಜನಿಕವಾಗಿ ಮಾತನಾಡಿದ್ದರು. ಈ ವೇಳೆ ಬಿಜೆಪಿ ವಿರುದ್ಧ ಹಾಗೂ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಅವಾಚ್ಯ ಪದಗಳನ್ನು ಬಳಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:

ಈ ಸಂಬಂಧ ಬಿಜೆಪಿ ಮುಖಂಡ ಮಹೇಶ್ ಗೌಳಿ ಅವರು ವಿಡಿಯೋ ದಾಖಲೆ ಸಹಿತ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾಷಣದ ವೇಳೆ ದ್ವೇಷಪೂರಿತ ಹೇಳಿಕೆ ನೀಡಿರುವ ಆರೋಪದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಮನವಿ ಮಾಡಿದ್ದರು.

ಸಾರ್ವಜನಿಕ ಭಾಷಣದ ಕುರಿತು ಮಹೇಶ್ ಗೌಳಿ ಅವರು ಜುಲೈ 28ರಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದು ಅಸಂಜ್ಞೆಯ ಅಪರಾಧವಾಗಿರುವ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಹಾಗೂ ಕಾನೂನು ಅಭಿಪ್ರಾಯ ಪಡೆದುಕೊಂಡ ಬಳಿಕ ಪ್ರಕರಣ ದಾಖಲಿಸುವುದಾಗಿ ಸ್ಟೇಷನ್ ಬಜಾರ್ ಪೊಲೀಸರು ತಿಳಿಸಿದ್ದರು.

ಇದೀಗ ದೂರು ನೀಡಿದ ಸುಮಾರು 22 ದಿನಗಳ ಬಳಿಕ, ಆಗಸ್ಟ್ 20ರಂದು ಸೈಯದ್ ಅಲೀಮ್ ಇಲಾಹಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !