ಹೊಸದಿಗಂತ ಡಿಜಿಟಲ್ ಡೆಸ್ಕ್:
ಔಷಧ ನಕಲಿ ಜಾಲ ಹಾಗೂ ಆಹಾರ ಸುರಕ್ಷತೆ ಮೇಲೆ ನಿಗಾ ಇರಿಸಲು ರಾಜ್ಯದಲ್ಲಿ ಶೀಘ್ರವೇ ಕಾವಲು ಪಡೆ ಅಸ್ತಿತ್ವಕ್ಕೆ ಬರಲಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಈ ಬಗ್ಗೆ ಸುಳಿವು ನೀಡಿದ್ದಾರೆ.
ನಕಲಿ ಔಷಧ ಜಾಲ ಹಾಗೂ ಆಹಾರ ಕಲಬೆರಕೆ, ಸ್ವಚ್ಛತೆಗೆ ಸಂಬಂಧಿಸಿ ಜನರಲ್ಲಿ ಜಾಗೃತಿ ಮೂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲು ನಿವೃತ್ತ ಹಾಗೂ ಪರಿಣಿತ ಹಿರಿಯ ನಾಗರಿಕರನ್ನು ಒಳಗೊಂಡ ಕಾವಲು ಪಡೆ (ವಾಚ್ ಟೀಂ)ಯನ್ನು ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಗುರುತಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಅವರು ತಿಳಿಸಿದ್ದಾರೆ.
ನಕಲಿ ಔಷಧ ಜಾಲ ಗಂಭೀರವಾಗಿದ್ದು, ಇದೊಂದು ದೊಡ್ಡ ಮಾಫಿಯಾ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಅನಧಿಕೃತ ಕಂಪನಿಗಳಿಂದ ಪೂರೈಕೆಯಾಗುತ್ತಿದೆ. ರಾಜ್ಯದ ಉದ್ದಗಲಕ್ಕೂ ಜನೌಷಧಿ ಸೇರಿದಂತೆ ದಾಳಿ ಮುಂದುವರಿದಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿ ಸ್ಟಾರ್ ಹೊಟೇಲ್ನಿಂದ ಹಿಡಿದು ತಳಮಟ್ಟದ ಬೀದಿ ಬದಿ ಆಹಾರ ಮಳಿಗೆಗಳಿಗೂ ದಾಳಿ ಮುಂದುವರಿಯುತ್ತಿದೆ. ಜನರು ದೂರು ನೀಡಿ ಕ್ರಮ ಆದಾಗ ಬದಲಾವಣೆ ಸಾಧ್ಯವಾಗುತ್ತದೆ. ದಾಳಿ ಅಥವಾ ಪರಿಶೀಲನೆಯ ಉದ್ದೇಶ ಯಾರಿಗೂ ಶಿಕ್ಷೆ ನೀಡುವುದಲ್ಲ. ಬದಲಿಗೆ ಅವರ ತಪ್ಪನ್ನು ತೋರಿಸಿ ಸರಿಪಡಿಸಲು ಅವಕಾಶ ನೀಡುವುದು. ಸದ್ಯ ದಾಳಿ ನಡೆಸಲಾಗಿರುವ ಎಲ್ಲಾ ಕಡೆಗಳಲ್ಲೂ ನೋಟೀಸು ಕೊಟ್ಟು ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು. ಹೊಟೇಲ್ ಅಸೋಸಿಯೇಶನ್, ಬೀದಿ ಬದಿ ಆಹಾರ ಮಾರಾಟಗಾರರನ್ನು ಜಿಲ್ಲಾ ಮಟ್ಟದಲ್ಲಿ ಸಭೆ ಕರೆಸಿ ಅವರಿಗೆ ಸ್ವಚ್ಛತೆ ಬಗ್ಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಹೊಟೇಲ್ಗಳಲ್ಲಿ ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡದೆ ಅದನ್ನು ಬಯೋ ಡೀಸೆಲ್ ಆಗಿ ಬಳಕೆ ಮಾಡುವ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ಆಹಾರಗಳಿಗೆ ಬಳಸುವ ಕೃತಕ ಬಣ್ಣ ಸೇರಿದಂತೆ ಎಲ್ಲಾ ರೀತಿಯ ಕಲಬೆರಕೆ, ಕೃತಕ ವಸ್ತುಗಳನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿದೆ. ಆಹಾರ ಸುರಕ್ಷತೆ ಹಾಗೂ ನಕಲಿ ಔಷಧಕ್ಕೆ ಸಂಬಂಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ದಾಳಿ ಹಾಗೂ ಪರಿಶೀಲನೆ ಪ್ರಾಥಮಿಕ ಹಂತವಾಗಿದ್ದು, ಸಾರ್ವಜನಿಕರು ಸಹಕಾರ ನೀಡುವುದು ಅಗತ್ಯವಾಗಿದೆ. ಕ್ಯೂಆರ್ ಕೋಡ್ ಮೂಲಕ ದೂರು ನೀಡುವ ಕ್ರಮ ಆರಂಭವಾಗಿದ್ದು, ಕಳೆದ ಎರಡು ಮೂರು ದಿನಗಳಲ್ಲಿಯೇ ಸುಮಾರು 400ರಷ್ಟು ದೂರುಗಳು ಬಂದಿವೆ ಎಂದು ಸಚಿವ ಖಾದರ್ ಮಾಹಿತಿ ನೀಡಿದರು.



