ಹೊಸದಿಗಂತ ವರದಿ ಕಲಬುರಗಿ:
ವಂದೇ ಮಾತರಂ ಗೀತೆಯ ಕುರಿತು ನಡೆಯುತ್ತಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಇತಿಹಾಸವನ್ನು ಸರಿಯಾಗಿ ಓದಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕಲಬುರಗಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಗುವ ಮುನ್ನವೇ ವಂದೇ ಮಾತರಂ ಗೀತೆಯನ್ನು ಎರಡು ಪ್ಯಾರಾಗಳಿಗೆ ಸೀಮಿತಗೊಳಿಸಲಾಗಿತ್ತು. ಇಂದಿಗೂ ಕಾಂಗ್ರೆಸ್ ಸೇವಾದಳ ಅದೇ ಎರಡು ಪ್ಯಾರಾಗಳನ್ನು ಹಾಡುತ್ತಿದೆ ಎಂದು ತಿಳಿಸಿದರು.
ರವೀಂದ್ರನಾಥ ಟ್ಯಾಗೋರ್ ಕೂಡ ಎರಡು ಪ್ಯಾರಾಗಳನ್ನೇ ಹಾಡುವ ಕುರಿತು ಹೇಳಿದ್ದರು. ನಾವು ಅದನ್ನೇ ಹಾಡಿದರೆ ದೇಶದ್ರೋಹಿಗಳಾಗುತ್ತೇವೆಯೇ ಎಂದು ಪ್ರಶ್ನಿಸಿದ ಖರ್ಗೆ, ಹಾಗಿದ್ದರೆ ಟ್ಯಾಗೋರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಕೂಡ ದೇಶದ್ರೋಹಿಗಳೇನಾ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, 11 ವರ್ಷಗಳಿಂದ ಅಧಿಕಾರದಲ್ಲಿರುವವರು ಈ ವಿಚಾರವನ್ನು ಈಗ ಯಾಕೆ ಪ್ರಸ್ತಾಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯ ಹೋರಾಟ ನಡೆಸಿದವರನ್ನು ಅವಮಾನಿಸುವ ಬದಲು ದೇಶದ ಜನತೆಗೆ ಉದ್ಯೋಗ, ಶಿಕ್ಷಣ ಹಾಗೂ ಮನರೇಗಾ ಮಾದರಿಯ ಯೋಜನೆಗಳನ್ನು ಒದಗಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:
ವಂದೇ ಮಾತರಂ ವಿಚಾರವನ್ನು ರಾಜಕೀಯ ವಿವಾದವನ್ನಾಗಿ ಮಾಡುವ ಬದಲು ದೇಶದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು ಎಂದು ಖರ್ಗೆ ಆಗ್ರಹಿಸಿದರು.



