ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆ ವಿಷಯಕ್ಕೆ ಆರಂಭವಾದ ಜಗಳವೇ ದುರಂತಕ್ಕೆ ತಿರುಗಿ ಪತ್ನಿಯ ಸಾವು ಸಂಭವಿಸಿರುವ ಘಟನೆ ಅಮ್ರೋಹಾದಲ್ಲಿ ನಡೆದಿದೆ. ಆಗಸ್ಟ್ 21ರಂದು ನಡೆದ ಈ ಘಟನೆ ಇದೀಗ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಡ ಹಾಗೂ ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ತನಿಖೆಯ ಹಂತದಲ್ಲಿದೆ.
ಮಾಹಿತಿಯ ಪ್ರಕಾರ, 10 ತಿಂಗಳ ಹಿಂದೆಯಷ್ಟೇ ರೀನಾ (21) ಮತ್ತು ನಿಗಮ್ ಮದುವೆಯಾಗಿತ್ತು. ನಿಗಮ್ ಮದ್ಯ ಮತ್ತು ಕೋಳಿ ಮಾಂಸ ತಂದಿದ್ದ, ಪತ್ನಿ ರೀನಾ ಸಾಂಬರ್ ಮಾಡುವುದನ್ನು ನಿರಾಕರಿಸಿದ್ದಳು. ಇದರಿಂದ ಇಬ್ಬರ ನಡುವೆ ಗಲಾಟೆ ಉಂಟಾಗಿ ಜಗಳ ತೀವ್ರಗೊಂಡಿತು. ಜಗಳದ ಮಧ್ಯೆ ರೀನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಜಗಳದ ವೇಳೆ ರೀನಾ ಮೇಲೆ ನಿಗಮ್ ಹಲ್ಲೆ ನಡೆಸಿದ್ದನು. ಇದರಿಂದ ಭಯಗೊಂಡ ನಿಗಮ್, ಸಂಬಂಧಿಕರ ಸಹಾಯದಿಂದ ರೀನಾ ಶವವನ್ನ ಗಂಗಾ ನದಿಗೆ ಎಸೆದಿದ್ದನು. ರೀನಾ ದೇಹವನ್ನು ಹಾಳೆಯಲ್ಲಿ ಸುತ್ತಿ, ಸುತ್ತಲೂ ಮಣ್ಣು ಹಚ್ಚಿ ಗಂಗಾನದಿಗೆ ಎಸೆಯಲಾಗಿತ್ತು. ಶವ ನದಿಗೆ ಎಸೆದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಪತ್ನಿ ರೀನಾ ಓಡಿ ಹೋಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದನು.
ತನಿಖೆಯಲ್ಲಿ ಸಂಶಯ ಮೂಡಿದ ಬಳಿಕ ವಿಚಾರಣೆಗೊಳಪಡಿಸಿದಾಗ, ಆತ್ಮಹತ್ಯೆಯಾದ ರೀನಾ ಶವವನ್ನು ಗಂಗಾ ನದಿಗೆ ಎಸೆದಿರುವುದನ್ನು ನಿಗಮ್ ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದಲ್ಲಿ ನಿಗಮ್ ಸಂಬಂಧಿಕರಾದ ಜಿತೇಂದ್ರ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನಿಗಮ್ ಪೋಷಕರು ಪ್ರಸ್ತುತ ನಾಪತ್ತೆಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ರೀನಾಳ ಸಾವು ಕೊಲೆನಾ ಅಥವಾ ಆತ್ಮಹತ್ಯೆಯಾ ಎಂಬುದು ಸ್ಪಷ್ಟವಾಗಿಲ್ಲ. ಶವ ಪತ್ತೆ ಕಾರ್ಯ ಇನ್ನೂ ಮುಂದುವರಿದಿದೆ.