ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಇರಾನ್ ನಡುವೆ ಆರ್ಥಿಕ ಮತ್ತು ರಾಜತಾಂತ್ರಿಕ ಸವಾಲುಗಳು ತೀವ್ರಗೊಂಡಿದ್ದು, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೊಸ ರಾಜಕೀಯ ಸಂಚಲನ ಉಂಟಾಗಿದೆ. ಅಮೆರಿಕವು ಇರಾನ್ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಲು ಮುಂದಾಗಿರುವ ಬೆನ್ನಲ್ಲೇ, ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ತೈಲ ರಫ್ತು ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಇರಾನ್ ದೃಢ ನಿರ್ಧಾರ ಮಾಡಿದೆ.
ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಕಠಿಣ ನಿಲುವು
ಇರಾನ್ನ ಅತ್ಯುನ್ನತ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಅವರು ಈ ಕುರಿತು ಮಾತನಾಡುತ್ತಾ, ತಮ್ಮ ದೇಶದ ವಿರುದ್ಧ ನಡೆಯುತ್ತಿರುವ ಆರ್ಥಿಕ ಸಮರ ಮುಂದುವರಿದರೆ, ಪರ್ಷಿಯನ್ ಕೊಲ್ಲಿ ಅಥವಾ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ರಫ್ತಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದಾಗಿ ತಿಳಿಸಿದ್ದಾರೆ. ಇರಾನ್ ಮೇಲಿನ ಆರ್ಥಿಕ ಒತ್ತಡಕ್ಕೆ ಸಹಕರಿಸುವ ಯಾವುದೇ ಕ್ರಮವನ್ನು ತಮ್ಮ ದೇಶವು ಗಂಭೀರವಾಗಿ ಪರಿಗಣಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ Economic D-Day’ ಯೋಜನೆ
ಮತ್ತೊಂದೆಡೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಅತ್ಯಂತ ಕಠಿಣ ಆರ್ಥಿಕ ಕಾರ್ಯಾಚರಣೆ ಕೈಗೊಳ್ಳುವುದಾಗಿ ಘೋಷಿಸಿದ್ದರು. ಇದಕ್ಕೆ ಪೂರಕವಾಗಿ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಮಾತನಾಡಿ, ಇರಾನ್ಗೆ ಲಭಿಸುವ ಆರ್ಥಿಕ ಸಂಪನ್ಮೂಲ ಮಾರ್ಗಗಳನ್ನು ತಡೆಯಲು ವಾಷಿಂಗ್ಟನ್ ‘Economic D-Day’ ತಂತ್ರಗಾರಿಕೆಯನ್ನು ಜಾರಿಗೆ ತರುತ್ತಿದೆ ಎಂದು ಹೇಳಿದ್ದಾರೆ.
ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯ ಭರವಸೆ
ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಅಡೆತಡೆ ಉಂಟಾಗದಂತೆ ತಡೆಯಲು ಇತರ ಪ್ರಮುಖ ಇಂಧನ ಉತ್ಪಾದಕ ದೇಶಗಳು ಪರ್ಯಾಯ ಮಾರ್ಗಗಳನ್ನು ವಿಸ್ತರಿಸುತ್ತಿವೆ, ಇದರಿಂದಾಗಿ ಜಾಗತಿಕ ತೈಲ ಬೆಲೆಗಳಲ್ಲಿ ತೀವ್ರ ಕುಸಿತ ಅಥವಾ ಕೊರತೆ ಉಂಟಾಗದಂತೆ ಮಾರುಕಟ್ಟೆಗಳು ಎಚ್ಚರಿಕೆ ವಹಿಸುತ್ತಿವೆ.



