ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಬೈಲ್ ಟವರ್ ನಿಂದ ಸುಮಾರು 60 ಲೀಟರ್ ಡೀಸೆಲ್ ಕಳವು ಮಾಡಲು ಯತ್ನಿಸಿದ ಆರೋಪದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು ಕಾವೂರು ನಿವಾಸಿ ಹಾಗೂ ಇಂಡಸ್ ಮೊಬೈಲ್ ಟವರ್ ಸಂಸ್ಥೆಯ ಸೆಕ್ಯುರಿಟಿ ಸೂಪರ್ವೈಸರ್ ದಿನೇಶ್ ಕೆ. ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಇಂಡಸ್ ಮೊಬೈಲ್ ಟವರ್ನ ಟೆಕ್ನಿಷಿಯನ್ ದೀಕ್ಷಿತ್ ಎಂಬವರು ರಾತ್ರಿ ಟವರ್ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಸಮೀಪದ ರಸ್ತೆಯ ಬಳಿ ನಿಲ್ಲಿಸಿದ್ದ ಕಾರಿನ ಬಳಿ ಮೂವರು ವ್ಯಕ್ತಿಗಳು ಎರಡು ಕ್ಯಾನ್ಗಳಲ್ಲಿ ಡೀಸೆಲ್ ತುಂಬಿಸುತ್ತಿರುವುದು ಗಮನಕ್ಕೆ ಬಂದಿದೆ. ಅವರ ಬಳಿಗೆ ತೆರಳುತ್ತಿದ್ದಂತೆ ಮೂವರು ವ್ಯಕ್ತಿಗಳು ಡೀಸೆಲ್ ಕ್ಯಾನ್ಗಳೊಂದಿಗೆ ನೋಂದಣಿ ಸಂಖ್ಯೆಯ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ:
ಪರಾರಿಯಾದವರ ಪೈಕಿ ಓರ್ವ ಇದೇ ಟವರ್ನಲ್ಲಿ ಈ ಹಿಂದೆ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ದೀಕ್ಷಣ್ ಎಂಬಾತ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೂವರು ಸೇರಿಕೊಂಡು ಸುಮಾರು 60 ಲೀಟರ್ ಡೀಸೆಲ್ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ 62/2026, ಕಲಂ 303(2) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಆರೋಪಿ ಧೀಕ್ಷಣ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಹಾಗೂ ಕಳವು ಮಾಡಲಾದ ಡೀಸೆಲ್ ಮತ್ತು ಕೃತ್ಯಕ್ಕೆ ಬಳಸಿದ ವಾಹನದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.



