August 25, 2026
Tuesday, August 25, 2026
spot_img

ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಳವಳ: ಪಾಕ್ ಪ್ರಧಾನಿಗೆ ಪತ್ರ ಬರೆದ ಕ್ರಿಕೆಟ್ ದಿಗ್ಗಜರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ವಿಚಾರ ಇದೀಗ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ. ಜೈಲಿನಲ್ಲಿರುವ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಮಾನವೀಯ ರೀತಿಯ ಆರೈಕೆ ನೀಡಬೇಕು ಎಂದು ಭಾರತ ಸೇರಿದಂತೆ ವಿವಿಧ ದೇಶಗಳ 21 ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮನವಿ ಮಾಡಿದ್ದಾರೆ.

ಭಾರತದ ಮಾಜಿ ನಾಯಕರುಗಳಾದ ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಕೂಡ ಈ ಮನವಿಗೆ ಸಹಿ ಹಾಕಿದ್ದಾರೆ.

ವೈದ್ಯಕೀಯ ಪರೀಕ್ಷೆಗೆ ಅವಕಾಶ ನೀಡುವಂತೆ ಮನವಿ

ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಸ್ವತಂತ್ರ ಹಾಗೂ ಸಮಗ್ರ ವೈದ್ಯಕೀಯ ತಪಾಸಣೆ ನಡೆಸಲು ಅವಕಾಶ ನೀಡಬೇಕು ಎಂಬುದು ಮಾಜಿ ನಾಯಕರ ಪ್ರಮುಖ ಬೇಡಿಕೆಯಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚಿಸಲಾಗಿರುವ ವೈದ್ಯಕೀಯ ಮಂಡಳಿಯಲ್ಲಿ ಇಮ್ರಾನ್ ಖಾನ್ ಅವರ ವೈಯಕ್ತಿಕ ವೈದ್ಯರೂ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ಕುಟುಂಬ ಭೇಟಿಗೂ ಅಡ್ಡಿಯಾಗದಂತೆ ಆಗ್ರಹ

ನ್ಯಾಯಾಲಯದ ಆದೇಶದಂತೆ ನಡೆಯಬೇಕಿರುವ ಕುಟುಂಬ ಭೇಟಿಗಳಿಗೆ ಯಾವುದೇ ಆಡಳಿತಾತ್ಮಕ ತಡೆ ಉಂಟಾಗಬಾರದು ಎಂದು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಅಲ್ಲದೆ, ವೈದ್ಯಕೀಯ ತಪಾಸಣೆಯ ಬಳಿಕ ಅಗತ್ಯವೆಂದು ಶಿಫಾರಸು ಮಾಡುವ ಚಿಕಿತ್ಸೆಯನ್ನು ಯಾವುದೇ ವಿಳಂಬವಿಲ್ಲದೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ಕಪಿಲ್, ಗವಾಸ್ಕರ್ ಸೇರಿ ಹಲವು ದಿಗ್ಗಜರ ಮನವಿ

ಈ ಮನವಿಗೆ ಮೈಕೆಲ್ ಅಥರ್ಟನ್, ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಅಲಿಸ್ಟರ್ ಕುಕ್, ಆಡಂ ಗಿಲ್‌ಕ್ರಿಸ್ಟ್, ನಾಸರ್ ಹುಸೇನ್, ಕ್ಲೈವ್ ಲಾಯ್ಡ್, ಅರ್ಜುನ ರಣತುಂಗ ಸೇರಿದಂತೆ 21 ಮಾಜಿ ಅಂತಾರಾಷ್ಟ್ರೀಯ ನಾಯಕರು ಸಹಿ ಹಾಕಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಬೆಳೆಸಿಕೊಂಡ ಸಂಬಂಧವನ್ನು ಗಮನದಲ್ಲಿಟ್ಟುಕೊಂಡೇ ಈ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

1992ರ ವಿಶ್ವಕಪ್ ಗೆದ್ದ ಪಾಕಿಸ್ತಾನದ ಏಕೈಕ ನಾಯಕ

ಇಮ್ರಾನ್ ಖಾನ್ ಪಾಕಿಸ್ತಾನ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. 1992ರಲ್ಲಿ ಅವರ ನಾಯಕತ್ವದಲ್ಲೇ ಪಾಕಿಸ್ತಾನ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. 1971ರಿಂದ 1992ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅವರು 88 ಟೆಸ್ಟ್ ಹಾಗೂ 175 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 3,807 ರನ್ ಗಳಿಸುವುದರ ಜೊತೆಗೆ 362 ವಿಕೆಟ್‌ಗಳನ್ನು ಪಡೆದಿದ್ದರು.

ಇಮ್ರಾನ್ ಖಾನ್ ಅವರಿಗೆ 73 ವರ್ಷ ವಯಸ್ಸಾಗಿದ್ದು, ಕಾನೂನು ಮತ್ತು ರಾಜಕೀಯ ವಿಚಾರಗಳು ಏನೇ ಇರಲಿ, ನ್ಯಾಯಾಲಯ ಸೂಚಿಸಿರುವ ವೈದ್ಯಕೀಯ ಪ್ರಕ್ರಿಯೆ ಸರಿಯಾಗಿ ನಡೆಯುವುದು ಮೂಲಭೂತ ಮಾನವೀಯ ವಿಚಾರ ಎಂದು ಮಾಜಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !