ಹೊಸದಿಗಂತ ವರದಿ ಹಲಗೂರು:
ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದ ಏಳು ಕಾಡಾನೆಗಳ ಗುಂಪು ಬಾಳೆಹೊನ್ನಿಗ ಗ್ರಾಮದ ಬಿ.ಕೆ. ಇಂದ್ರ ಮತ್ತು ಬಿ.ವಿ. ಕೃಷ್ಣಪ್ಪ ಅವರಿಗೆ ಸೇರಿದ ಬಾಳೆ ತೋಟಕ್ಕೆ ನುಗ್ಗಿ ಸುಮಾರು 400 ಫಸಲು ಭರಿತ ಬಾಳೆ ಗಿಡಗಳನ್ನು ಮುರಿದು ತಿರುಳನ್ನು ತಿಂದು ನಾಶಪಡಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಕಾಡಾನೆಗಳ ದಾಳಿಯಿಂದ ಸುಮಾರು 3 ಲಕ್ಷ ನಷ್ಟ ಸಂಭವಿಸಿದೆ.
ಮೂಲತಃ ಬಾಳೆಹೊನ್ನಿಗ ಗ್ರಾಮದ ನಿವಾಸಿ ರಾಜು ಮಾತನಾಡಿ, ತಮ್ಮ ಮಾವ ಬಿ.ವಿ. ಕೃಷ್ಣಪ್ಪ ಹಾಗೂ ತಮ್ಮ ಪತ್ನಿ ಬಿ.ಕೆ. ಇಂದ್ರರಾಜ್ ಅವರು ಮೂರು ಎಕರೆ ಜಮೀನಿನಲ್ಲಿ ಸುಮಾರು 2,784 ಯಾಲಕ್ಕಿ ಬಾಳೆ ಗಿಡಗಳನ್ನು ಬೆಳೆಸಿದ್ದರು. ವಿದ್ಯುತ್ ಸಮಸ್ಯೆಯ ನಡುವೆಯೂ ರಾತ್ರಿ ಹಗಲು ಎನ್ನದೆ ಜಮೀನಿಗೆ ನೀರು ಹಾಯಿಸಿ ಫಸಲು ಬೆಳೆಸಲಾಗಿತ್ತು. ಇನ್ನು ಎರಡು ತಿಂಗಳಲ್ಲಿ ಬಾಳೆ ಗೊನೆಗಳನ್ನು ಕಟಾವು ಮಾಡಿ ಮಾರಾಟ ಮಾಡಬೇಕಾಗಿತ್ತು ಎಂದು ತಿಳಿಸಿದರು.
ಆದರೆ ಸೋಮವಾರ ತಡರಾತ್ರಿ ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದ ಏಳು ಕಾಡಾನೆಗಳ ಗುಂಪು ಬಾಳೆ ತೋಟಕ್ಕೆ ನುಗ್ಗಿದೆ. ಫಲ ಬಿಟ್ಟಿದ್ದ ಸುಮಾರು 400 ಬಾಳೆ ಗಿಡಗಳನ್ನು ಮುರಿದು, ತಿರುಳನ್ನು ತಿಂದು ಬೆಳೆಯನ್ನು ಸಂಪೂರ್ಣವಾಗಿ ಹಾನಿಗೊಳಿಸಿವೆ ಎಂದು ರಾಜು ಹೇಳಿದರು.
ಇದನ್ನೂ ಓದಿ:
ಆನೆಗಳ ದಾಳಿ ಬಗ್ಗೆ ಮಾಹಿತಿ ತಿಳಿದ ರಾಮನಗರ ವ್ಯಾಪ್ತಿಯ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಅರಣ್ಯ ಪ್ರದೇಶದತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯ ಸಿಬ್ಬಂದಿ ರಾತ್ರಿ ವೇಳೆ ಸ್ಥಳಕ್ಕೆ ಆಗಮಿಸದಿದ್ದರೆ ಇಡೀ ಬಾಳೆ ತೋಟವೇ ನಾಶವಾಗುತ್ತಿತ್ತು ಎಂದು ರಾಜು ಹೇಳಿದರು.
ಹಲಗೂರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸದಿರುವ ಬಗ್ಗೆ ರಾಜು ಬೇಸರ ವ್ಯಕ್ತಪಡಿಸಿದರು.
ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ
ರೈತರು ಕಷ್ಟಪಟ್ಟು ಬೆಳೆದ ಫಸಲು ಕೈ ಸೇರುವ ಮುನ್ನವೇ ಕಾಡಾನೆಗಳು ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯಿಂದ ನಾಶವಾಗುತ್ತಿದೆ. ಹೀಗಾಗಿ ಕಾಡಂಚಿನಲ್ಲಿ ಆನೆ ಕಂದಕಗಳನ್ನು ನಿರ್ಮಿಸುವುದು, ರೈಲ್ವೆ ಕಂಬಿ ಬ್ಯಾರಿಕೇಡ್ ಹಾಗೂ ತೂಗು ಸೋಲಾರ್ ಬೇಲಿ ಅಳವಡಿಸುವ ಮೂಲಕ ಕಾಡುಪ್ರಾಣಿಗಳು ಕೃಷಿ ಜಮೀನುಗಳಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಇದರೊಂದಿಗೆ ಸರ್ಕಾರದಿಂದ ದೊರೆಯುವ ಪರಿಹಾರ ಮೊತ್ತ ಸಾಕಾಗುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಪತ್ರ ಸಲ್ಲಿಸಿದ್ದಾರೆ.



