September 17, 2026
Thursday, September 17, 2026
spot_img

ಕಾವೇರಿ ನೀರು ಹರಿಸುವ ಆದೇಶ ವಿರೋಧಿಸಿ ಕೆಆರ್‌ಎಸ್‌ಗೆ ಮುತ್ತಿಗೆ ಯತ್ನ: ವಾಟಾಳ್ ನಾಗರಾಜ್ ಬಂಧನ

ಹೊಸದಿಗಂತ ವರದಿ ಶ್ರೀರಂಗಪಟ್ಟಣ:

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಮತ್ತೆ ನೀರು ಬಿಡಲು CWRC ನೀಡಿರುವ ಆದೇಶವನ್ನು ಖಂಡಿಸಿ ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ ಘಟನೆ ನಡೆದಿದೆ.

ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜಲಾಶಯದ ಮುಂಭಾಗದಲ್ಲಿ ಜಮಾಯಿಸಿ, CWRC ಹಾಗೂ ತಮಿಳುನಾಡಿನ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ವಾಟಾಳ್ ನಾಗರಾಜ್ ಮಾತನಾಡಿ, ಪ್ರತಿ ಬಾರಿಯೂ CWRC ಸೇರಿದಂತೆ ನೀರಾವರಿ ಹಂಚಿಕೆ ಪ್ರಾಧಿಕಾರಗಳು ತಮಿಳುನಾಡಿನ ಪರವಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಸ್ಥಳೀಯ ಪರಿಸ್ಥಿತಿ ಹಾಗೂ ರೈತರ ಸಂಕಷ್ಟವನ್ನು ಪರಿಗಣಿಸದೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಪದೇಪದೆ ಆದೇಶ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:

ರಾಜ್ಯದ ರೈತರ ಬೆಳೆಗಳಿಗೆ ನೀರು ಒದಗಿಸುವ ಬದಲು ಜಲಾಶಯದ ನೀರನ್ನು ಹೊರಗೆ ಹರಿಸುವುದರಿಂದ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು. ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು.

ಒಂದು ವೇಳೆ ಪ್ರಾಧಿಕಾರದ ಆದೇಶಕ್ಕೆ ಮಣಿದು ತಮಿಳುನಾಡಿಗೆ ನೀರು ಹರಿಸಿದರೆ, ರಾಜ್ಯ ಸರ್ಕಾರದ ವಿರುದ್ಧವೂ ಕನ್ನಡಿಗರು ಧ್ವನಿ ಎತ್ತಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಮುಂದಾದ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !