ಅಮ್ಮಂದಿರು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿಬಿಟ್ರೆ ಅಪ್ಪಂದಿರು ಕೆಲಸ, ಕಾಲ್ಸ್ ಹಾಗೂ ರೀಲ್ಸ್ನಲ್ಲಿ ಮುಳುಗಿ ಹೋಗಿಬಿಡ್ತಾರೆ. ಫೋನ್ ಇಲ್ಲದಿದ್ರೆ ಚೆನ್ನಾಗಿರುತ್ತಿತ್ತು ಎಂದು ಎಷ್ಟೋ ಪತ್ನಿಯರು ತಮ್ಮ ಪತಿಗೆ ಬೈಯೋದನ್ನು ನೋಡಿಯೇ ಇರ್ತೀರಿ. ನಿಮ್ಮ ಪತಿ ಫೋನ್ ಅಡಿಕ್ಟ್ ಎಂದು ಕಂಡು ಹಿಡಿಯೋದು ಹೇಗೆ? ತುಂಬಾನೇ ಸಿಂಪಲ್. ನಿಮ್ಮನ್ನು ಮಾತನಾಡಿಸೋದಕ್ಕಿಂತ ಅಥವಾ ಮಕ್ಕಳನ್ನು ಆಡಿಸೋದಕ್ಕಿಂತ ಹೆಚ್ಚು ಪ್ರಿಫರೆನ್ಸ್ ಫೋನ್ಗೆ ಕೊಡ್ತಿದ್ದಾರಾ? ಯೋಚಿಸಿದ್ರೆ ಉತ್ತರ ತಾನಾಗಿಯೇ ಸಿಗುತ್ತದೆ. ಫೋನ್ ಅಡಿಕ್ಷನ್ ಕೂಡ ಕುಡಿತದ ಅಡಿಕ್ಷನ್ನಷ್ಟೇ ಮಾರಕ. ಅಲ್ಲಿ ಕುಡಿತಕ್ಕೆ ಅಡಿಕ್ಟ್ ಆಗಿದ್ದೀನಿ ಎನ್ನೋದು ಕುಡುಕನಿಗೆ ಗೊತ್ತಿರುತ್ತದೆ. ಆದರೆ ಫೋನ್ ಅಡಿಕ್ಟ್ಗಳಿಗೆ ತಾವು ಅಡಿಕ್ಟ್ ಅನ್ನೋದೇ ಗೊತ್ತಿರೋದಿಲ್ಲ.. ಫೋನ್ ಅತಿಯಾಗಿ ಬಳಕೆ ಮಾಡುವ ಗಂಡಸರು ಇದ್ದಾರೆ, ಬಟ್ ಅಡಿಕ್ಟ್ಗಳಿಗೂ ಅವರಿಗೂ ವ್ಯತ್ಯಾಸವಿರುತ್ತದೆ. ನಿಮ್ಮ ಮನೆಯಲ್ಲಿ ಫೋನ್ ಅಡಿಕ್ಟ್ಗಳಿದ್ದಾರೆ ಎಂದು ಹೀಗೆ ತಿಳಿದುಕೊಳ್ಳಿ.

ಎದ್ದ ತಕ್ಷಣ ಯಾರ ಮುಖ ನೋಡ್ತೀರಿ?
ಬೆಳಗ್ಗೆ ಎದ್ದ ತಕ್ಷಣ ಎಲ್ಲರಲ್ಲಿಯೂ ಒಂದು ರೀತಿಯ ಕೃತಜ್ಞತಾ ಭಾವ ಇರುತ್ತದೆ. ಈಗಿರುವ ಜೀವನಕ್ಕೋ, ಪಕ್ಕದಲ್ಲಿ ಮಲಗಿರುವ ಮುದ್ದಾದ ಹೆಂಡತಿಯನ್ನು ನೋಡಿಯೋ ಅಥವಾ ಮಧ್ಯದಲ್ಲಿ ಮಲಗಿರುವ ಮುದ್ದಾಗ ಮಗನನ್ನು ನೋಡಿದಾಗ ಜೀವನದಲ್ಲಿ ನಾನು ಎಲ್ಲವನ್ನೂ ಪಡೆದುಕೊಂಡಿದ್ದೇನೆ ಎನ್ನುವ ಭಾವನೆ ಇರುತ್ತದೆ. ಆದರೆ ಫೋನ್ ಅಡಿಕ್ಟ್ಗಳು ಮೊದಲು ತಮ್ಮ ಕುಟುಂಬವನ್ನು ನೋಡೋದಿಲ್ಲ. ಎದ್ದ ತಕ್ಷಣ ಕೈ ಫೋನ್ಗಾಗಿ ಹುಡುಕಾಟ ಮಾಡುತ್ತದೆ. ಏನೂ ಅರ್ಜೆಂಟ್ ಇಲ್ಲ, ಯಾವ ಫೋನೂ ಬಂದಿಲ್ಲ. ಆದರೆ ಫೋನ್ ನೋಡಬೇಕಷ್ಟೇ ಎಂದು ಮೆದುಳು ಹೇಳುತ್ತದೆ.

ಫೋನ್ ಇಲ್ಲದೆ ಅರ್ಧ ಗಂಟೆ ವಾಕ್ ಮಾಡ್ತೀರಾ?
ತುಂಬಾ ಸಿಂಪಲ್ ವಿಷಯ. ಪಾರ್ಕ್ ಅಥವಾ ರಸ್ತೆಯಲ್ಲಿ ಅರ್ಧ ಗಂಟೆ ಫೋನ್ ಇಲ್ಲದೆ ವಾಕಿಂಗ್ ಮಾಡೋಕೆ ಸಾಧ್ಯವಾ? ಮನೆಯಿಂದ ಪಾರ್ಕ್ಗೆ ಹೋಗೋಕೆ ಮುನ್ನ ಫೋನ್ ಬಿಟ್ಟು ಹೋಗಲು ಮನಸ್ಸಾಗುತ್ತದಾ? ಅಥವಾ ಕಷ್ಟಪಟ್ಟು ಫೋನ್ ಇಲ್ಲದೆ ವಾಕ್ ಮಾಡುವಾಗ ಅದನ್ನು ನೀವು ಮಿಸ್ ಮಾಡಿಕೊಳ್ತೀರಾ? ಆಲೋಚಿಸಿ ನೋಡಿ. ಸಮರ್ಥನೆ ಬೇಡ!

ಆಟಾಡೋಕೆ ಶಕ್ತಿಯಿಲ್ಲ, ಫೋನ್ ನೋಡೋಕಿದೆ
ಅಪ್ಪ ಪ್ಲೀಸ್ ಆಟಾಡೋಣ ಬಾ ಎಂದು ಮಗ ಕೇಳುವಾಗ, ಕೆಲಸ ಮಾಡಿ ಸುಸ್ತಾಗಿದೆ ಆಟಾಡೋಕೆ ಎನರ್ಜಿ ಇಲ್ಲ ಎಂದು ಹೇಳುತ್ತೀರಿ. ಮಗ ಒಕೆ ಎಂದು ಹಾಲಿನ ಮೂಲೆಯಲ್ಲಿ ಆಟಸಾಮಾನು ಹರಡಿಕೊಂಡು ಕೂರುತ್ತಾನೆ. ಆತನ ಎದುರಿನ ಸೋಫಾ ಮೇಲೆ ಕುಳಿತುಕೊಂಡು ಗಂಟೆಗಟ್ಟಲೆ ರೀಲ್ಸ್ ನೋಡುತ್ತೀರಿ. ಇಡೀ ನರ್ವಸ್ ಸಿಸ್ಟಮ್ ಡೌನ್ ಆಗಿದ್ದಾಗ ಫೋನ್ ಕಂಫರ್ಟ್ ಕೊಡುತ್ತದೆ ಅಂದ್ರೆ ನೀವು ಅಡಿಕ್ಟ್ ಎಂದರ್ಥ.

ಫೋನ್ ನೋಡೋಕೆ ಅಡ್ಡಿ ಮಾಡ್ಬೇಡಿ
ಸ್ಕ್ರೋಲ್ ಮಾಡಿಕೊಂಡು ನಗುತ್ತಿದ್ದ ವೇಳೆ ಆಟ ಆಡುತ್ತಿದ್ದ ಮಗಳ ನಗು ಜೋರಾಗಿರುತ್ತದೆ. ಅದು ನಿಮಗೆ ಕಿರಿಕಿರಿ ಆಗುತ್ತದಾ? ಅಪ್ಪ ಅಪ್ಪಾ ಎಂದು ಕೂಗುವ ದನಿ ಇರಿಟೇಟ್ ಆಗಿ ಬಾಯಿಮುಚ್ಚು ಹೇಳಿದ್ದೇ ಹೇಳಬೇಡ ಎಂದು ಮಗಳನ್ನು ಬೈದಿದ್ದೀರಾ? ಫೋನ್ ನೋಡುವಾಗ ಯಾರೇ ಮಾತನಾಡಿಸಿದರೂ ಕೇಳಿಸದೇ ಇರೋದು, ಜನ ಮಾತನಾಡುವಾಗಲೂ ಫೋನ್ ತೆಗದುನೋಡೋದು, ಮೊಬೈಲ್ ನೋಡುವಾಗ ಯಾರಾದರೂ ಮಾತನಾಡಿಸಿದರೆ ಕಿರಿಕಿರಿ ಮಾಡ್ಕೋಳೋದು ಉತ್ತಮವಲ್ಲ!

ಫೋನ್ ನೋಡೋದೇ ಹಾಬಿ
ಫೋನ್ ಅಡಿಕ್ಟ್ಗಳಿಗೆ ತಾವು ಫೋನ್ ಅಡಿಕ್ಟ್ ಅನ್ನೋದು ಗೊತ್ತಿರುತ್ತದೆ. ಆದರೆ ಅದನ್ನು ಅವರು ಒಪ್ಪಿಕೊಳ್ಳೋದಿಲ್ಲ. ಬೇರೆಯವರು ಹೇಳಿದರೆ ಇಷ್ಟವೂ ಆಗೋದಿಲ್ಲ. ಪ್ರತೀ ಬಾರಿ ಕೆಲಸ ಬಿಟ್ಟು ತಮ್ಮ ಮನರಂಜನೆಗಾಗಿ ಫೋನ್ ನೋಡುವಾಗ ಟೈಮ್ ವೇಸ್ಟ್ ಎಂದು ಗೊತ್ತಿದ್ದರೂ ಅದಕ್ಕೆ ಬ್ರೇಕ್ ಎಂದು ಹೆಸರಿಡುತ್ತಾರೆ. ಕೆಲಸದಿಂದ ಬ್ರೇಕ್ ತೆಗೆದುಕೊಂಡ ಜನರು ಫ್ರೆಶ್ ಆಗಿ ಬಂದು ಮತ್ತೆ ಕೆಲಸ ಶುರು ಮಾಡುತ್ತಾರೆ. ಆದರೆ ಫೋನ್ ಅಡಿಕ್ಟ್ಗಳು ಬ್ರೇಕ್ ಹೆಸರಿನಲ್ಲಿಯೂ ಫೋನ್ ನೋಡಿ ಇನ್ನಷ್ಟು ಒತ್ತಡದಲ್ಲಿ ವಾಪಾಸಾಗುತ್ತಾರೆ.

ನಾನು ಫೋನ್ ಅಡಿಕ್ಟ್ಸ್ ಅಲ್ಲ. ಬ್ಯುಸಿಯಾದ ಜೀವನದಿಂದ ಒಂದೈದು ನಿಮಿಷ ಬ್ರೇಕ್ ತಗೋತಿದ್ದೆ ಅಷ್ಟೆ. ರಿಲ್ಯಾಕ್ಸ್ ಮಾಡೋಕೆ ಫೋನ್ ನೋಡ್ತಾ ಇದ್ದೆ ಅಷ್ಟೆ ಎಂದು ನೀವು ಹೇಳಬಹುದು. ಆದರೆ ಇದೇ ರಿಲ್ಯಾಕ್ಷೇಶನ್ ಯಾವಾಗ ಅಡಿಕ್ಷನ್ ಆಗಿ ಬದಲಾಗುತ್ತದೋ ನಿಮಗೇ ಗೊತ್ತಾಗೋದಿಲ್ಲ. ಅದರಲ್ಲಿಯೂ ಸಂಸಾರಸ್ಥ ಗಂಡಸರು, ಮಕ್ಕಳ ತಂದೆಯಾದವರು ಪ್ರೆಸೆಂಟ್ನಲ್ಲಿ ಇರೋದು ತುಂಬಾನೇ ಮುಖ್ಯ. ದಿನದ ಸುಸ್ತನ್ನು ಮರೆಯೋದಕ್ಕೆ ನೋಡುವ ಫೋನ್ ನಿಮಗೇ ಗೊತ್ತಿಲ್ಲದಂತೆ ನಿಮ್ಮನ್ನು ಅದರೊಳಕ್ಕೆ ಎಳೆದುಕೊಳ್ಳುತ್ತಿದೆ. ಮಾಮೂಲಿ ಜೀವನಕ್ಕಿಂತ ಫೋನ್ ನೋಡೋದೇ ನಿಮಗೆ ಇಷ್ಟವಾದ ಕೆಲಸವಾಗಿಬಿಡೋಕೆ ಕೆಲವು ದಿನಗಳಷ್ಟೇ ಬಾಕಿ! ಫೋನ್ ನೋಡಲೇಬೇಡಿ, ಅದನ್ನು ದೂರ ಇಡಿ ಎಂದು ಹೇಳೋಕೆ ಸಾಧ್ಯವಿಲ್ಲ. ಈಗಿನ ಪ್ರತೀ ಕೆಲಸವೂ, ದುಡಿಮೆಯೂ ಫೋನ್ನಿಂದಲೇ ಬರುತ್ತದೆ. ಆದರೆ ಫೋನ್ ನಮ್ಮನ್ನು ಕಂಟ್ರೋಲ್ ಮಾಡೋಕೆ ಆರಂಭಿಸಿದ ಕ್ಷಣವೇ ನೀವು ಸೋತುಹೋದಂತೆ. ಕ್ಷಣಿಕ ಖುಷಿಯನ್ನು ಬದಿಗಿಟ್ಟು ನಿಮ್ಮ ರಿಯಲ್ ಲೈಫ್ ಕಡೆ ಗಮನಕೊಡಿ. ರಿಯಲ್ ಡೋಪಮೈನ್ ಸಿಗೋದು ಕುಟುಂಬದಲ್ಲೇ!!




