ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಂದರವಾದ, ದಟ್ಟವಾದ ಕೂದಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಆದರೆ ಇಂದಿನ ಬದಲಾದ ಜೀವನಶೈಲಿ, ಮಾಲಿನ್ಯ ಮತ್ತು ನಾವು ತಿಳಿಯದೆ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಕೂದಲು ಉದುರುವುದು, ತೆಳುವಾಗುವುದು ಹಾಗೂ ನೆತ್ತಿಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಿಮ್ಮ ಕೂದಲಿನ ಆರೋಗ್ಯವನ್ನು ಹಾಳುಮಾಡುತ್ತಿರುವ ಆ ಪ್ರಮುಖ ತಪ್ಪುಗಳು ಯಾವುದು?
ಬಿಸಿ ನೀರಿನ ಬಳಕೆ
ಅತಿಯಾದ ಬಿಸಿ ನೀರಿನಿಂದ ತಲೆಸ್ನಾನ ಮಾಡುವುದರಿಂದ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯಂಶ ಪೂರ್ಣವಾಗಿ ಕಡಿಮೆಯಾಗುತ್ತದೆ. ಇದರಿಂದ ನೆತ್ತಿ ಒಣಗಿ, ಹೊಟ್ಟು ಉಂಟಾಗುತ್ತದೆ. ಹಾಗೆಯೇ ಪ್ರತಿದಿನ ಶ್ಯಾಂಪೂ ಬಳಸುವುದು ಕೂದಲಿನ ಜೀವಕೋಶಗಳನ್ನು ದುರ್ಬಲಗೊಳಿಸುತ್ತದೆ.
ಒದ್ದೆ ಕೂದಲನ್ನು ಬಾಚುವುದು
ಕೂದಲು ಒದ್ದೆಯಾಗಿದ್ದಾಗ ಅತ್ಯಂತ ಸೂಕ್ಷ್ಮ ಹಾಗೂ ದುರ್ಬಲವಾಗಿರುತ್ತದೆ. ಆ ಸಮಯದಲ್ಲಿ ಬಾಚಣಿಗೆಯಿಂದ ಜೋರಾಗಿ ಸಿಕ್ಕು ಬಿಡಿಸುವುದು ಅಥವಾ ಬಲವಾಗಿ ಟವೆಲ್‌ನಿಂದ ಒರೆಸುವುದರಿಂದ ಕೂದಲು ಮದ್ಯದಲ್ಲೇ ತುಂಡಾಗುತ್ತದೆ. ಒದ್ದೆ ಕೂದಲನ್ನು ಮೃದುವಾದ ಮೈಕ್ರೋಫೈಬರ್ ಟವೆಲ್‌ನಿಂದ ಮೆಲ್ಲನೆ ಒರೆಸಬೇಕು.
ಉಪಕರಣಗಳ ಅತಿಯಾದ ಬಳಕೆ
ಹೇರ್ ಡ್ರೈಯರ್, ಸ್ಟ್ರೈಟ್ನರ್ ಮತ್ತು ಕರ್ಲಿಂಗ್ ಐರನ್‌ಗಳ ಅತಿಯಾದ ಬಳಕೆ ಕೂದಲಿನ ಪ್ರಾಕೃತಿಕ ತೇವಾಂಶವನ್ನು ಹೀರಿಕೊಳ್ಳುತ್ತದೆ. ಬಿಸಿಯ ತಾಪಕ್ಕೆ ಕೂದಲಿನ ತುದಿ ಸೀಳುವುದು ಮತ್ತು ಜೀವಹೀನವಾಗುವುದು ಖಚಿತ. ಇವುಗಳನ್ನು ಬಳಸುವ ಮುನ್ನ ‘ಹೀಟ್ ಪ್ರೊಟೆಕ್ಟೆಂಟ್ ಸ್ಪ್ರೇ’ ಬಳಸುವುದು ಕಡ್ಡಾಯ.
ಶಾಂಪೂ ಮತ್ತು ಕಂಡೀಷನರ್ ಬಳಕೆ
ಹಲವರು ಶಾಂಪೂವನ್ನು ಕೂದಲಿನ ತುದಿಗೆ ಮತ್ತು ಕಂಡೀಷನರ್ ಅನ್ನು ತಲೆಯ ನೆತ್ತಿಗೆ ಹಚ್ಚುವ ತಪ್ಪು ಮಾಡುತ್ತಾರೆ. ನೆನಪಿಡಿ, ಶಾಂಪೂವನ್ನು ನೆತ್ತಿಯ ಮೇಲಿನ ಕೊಳೆ ತೊಳೆಯಲು ಬಳಸಬೇಕು, ಕಂಡೀಷನರ್ ಅನ್ನು ತಲೆಯ ನೆತ್ತಿಗೆ ಹಚ್ಚದೆ ಕೇವಲ ಕೂದಲಿನ ತುದಿ ಭಾಗಕ್ಕೆ ಮಾತ್ರ ಹಚ್ಚಬೇಕು. ನೆತ್ತಿಗೆ ಕಂಡೀಷನರ್ ಹಚ್ಚಿದರೆ ಕೂದಲು ಶೀಘ್ರವಾಗಿ ಉದುರುತ್ತದೆ.
ಬಿಗಿಯಾದ ಹೇರ್ ಸ್ಟೈಲ್
ಕೂದಲನ್ನು ಗಟ್ಟಿಯಾಗಿ ಬಿಗಿದು ಜುಟ್ಟು ಹಾಕುವುದು ಅಥವಾ ಬ್ಯಾಂಡ್ ಹಾಕುವುದರಿಂದ ‘ಟ್ರಾಕ್ಷನ್ ಅಲೋಪೆಸಿಯಾ’ ಎಂಬ ಸಮಸ್ಯೆ ಬಂದು ಕೂದಲಿನ ಬೇರುಗಳು ಸಡಿಲಗೊಳ್ಳುತ್ತವೆ. ಜೊತೆಗೆ, ಅಮೋನಿಯಾ ಇರುವ ಕೃತಕ ಹೇರ್ ಡೈಗಳು ಹಾಗೂ ಬ್ಲೀಚಿಂಗ್ ಬಳಕೆಯು ನೆತ್ತಿಯ ಚರ್ಮಕ್ಕೆ ಹಾನಿ ಉಂಟುಮಾಡುತ್ತದೆ.
ಆಯಿಲ್ ಮಸಾಜ್
ಕೂದಲಿನ ಆರೋಗ್ಯಕ್ಕಾಗಿ ವಾರಕ್ಕೆರಡು ಬಾರಿಯಾದರೂ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ, ಪೌಷ್ಟಿಕ ಆಹಾರ ಮತ್ತು ನೀರು ಸೇವಿಸಿ. ನಿಮ್ಮ ಕೂದಲಿನ ಆರೈಕೆಯಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ ಸಾಕು, ನಿಮ್ಮ ಕೂದಲು ಸದಾ ಆರೋಗ್ಯಕರವಾಗಿ ಹೊಳೆಯುತ್ತದೆ.



