August 26, 2026
Wednesday, August 26, 2026
spot_img

ನೆಗೆಟಿವ್‌ ಪ್ರಚಾರ ಯಾಕೆ ಎಂದು ರಾಖಿ ಜಾಹೀರಾತನ್ನು ಹಿಂದಕ್ಕೆ ಪಡೆದ ಜೀವಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ರಾಲೆಟ್‌ ಧರಿಸಿ ಅಣ್ಣನಿಗೆ ರಾಖಿ ಕಟ್ಟುತಿರುವ ಜಾಹೀರಾತಿಗೆ ನೆಗೆಟಿವ್‌ ಪ್ರಚಾರ ಬರುತ್ತಿದ್ದಂತೆಯೇ ಖ್ಯಾತ ಜ್ಯುವೆಲ್ಲರಿ ಬ್ರಾಂಡ್‌ ಜೀವಾ ತಮ್ಮ ಅಡ್ವರ್ಟೈಸ್‌ಮೆಂಟ್‌ನ್ನು ಹಿಂಪಡೆದಿದೆ. ಯುಟ್ಯೂಬ್‌ನಲ್ಲಿ ಪೂರ್ಣ ಜಾಹೀರಾತು ಲಭ್ಯವಿತ್ತು. ಆದರೆ ಇದೀಗ ಜಾಹೀರಾತನ್ನು ತೆಗೆಯಲಾಗಿದೆ.

ಬ್ರಾಲೆಟ್‌ ಧರಿಸಿ ಯಾವ ಸಹೋದರಿಯೂ ರಾಖಿ ಕಟ್ಟೋದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಕ್ರಿತಿ ಸೆನೊನ್‌ರನ್ನು ಟ್ರೋಲ್‌ ಮಾಡಲಾಗಿತ್ತು. ಜಾಹೀರಾತಿನ ಕಾಸ್ಟ್ಯೂಮ್‌ ಡಿಸೈನರ್‌ ಚಾಯ್ಸ್‌ ಚೆನ್ನಾಗಿಲ್ಲ, ಜೀವಾ ಕಂಪನಿ ಸುಮ್ಮನೆ ಹಣ ವೇಸ್ಟ್‌ ಮಾಡಿಕೊಂಡಿದೆ ಎಂದೆಲ್ಲಾ ಕಮೆಂಟ್‌ಗಳು ಬಂದಿತ್ತು. ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದ್ಯಾವ ರೀತಿ ಬಟ್ಟೆ ಹಾಕಿ ಹಬ್ಬ ಆಚರಿಸಿದ್ದೀರಿ ಎಂದು ಆಡಿಕೊಂಡಿದ್ದರು. ವಿಷಯ ಗಂಭೀರ ತಿರುವು ತೆಗೆದುಕೊಂಡಿದ್ದು, ರಾಜಕೀಯದ ಘಟಾನುಘಟಿಗಳು ಈ ಜಾಹೀರಾತಿಗೆ ಪರ-ವಿರೋಧ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಜೀವಾ ಜಾಹೀರಾತನ್ನು ತೆಗೆದುಹಾಕಿದೆ.

ಜಾಹೀರಾತಿನಲ್ಲಿ ಏನಿತ್ತು?

ಪ್ರತಿಷ್ಠಿತ ಜ್ಯುವೆಲ್ಲರಿ ಬ್ರ್ಯಾಂಡ್‌ ಜೀವಾ ಕಡೆಯಿಂದ ರಕ್ಷಾಬಂಧನದ ಜಾಹೀರಾತು ಅಪ್‌ಲೋಡ್‌ ಆಗಿತ್ತು. ಇದರಲ್ಲಿ ನಟಿ ಕೃತಿ ಸೆನೊನ್‌ ಬಿಕಿಯಂತಹ ಟಾಪ್‌ ಧರಿಸಿದ್ದರು. ತಮ್ಮ ಸಹೋದರನಿಗೆ ಹಾಗೂ ಮನೆಯ ನಾಯಿಗೆ ಅವರು ರಾಖಿ ಕಟ್ಟಿದ್ದರು. ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಯಾವ ತಂಗಿ ಅಣ್ಣನಿಗೆ ರಾಖಿ ಕಟ್ಟುವಾಗ ಇಂತಹ ಬಟ್ಟೆ ಹಾಕೋತಾಳೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದರು.

ಕಂಗನಾ ರಣಾವತ್‌ Vs ಕೃತಿ ಸೆನೊನ್‌ ವಾರ್

‌ನಟಿ ಕಂಗನಾ ರಣಾವತ್‌ ಕೂಡ ಈ ಬಗ್ಗೆ ಕಮೆಂಟ್‌ ಮಾಡಿದ್ದು, ಹೆಣ್ಣುಮಕ್ಕಳಿಗೆ ಹಾಕಿಕೊಳ್ಳೋಕೆ ನೂರಾರು ರೀತಿಯ ಬಟ್ಟೆಗಳಿವೆ. ಆದರೆ ರಾಖಿ ಜಾಹೀರಾತಿಗೆ ಇಂತಹ ಬಟ್ಟೆ ಹಾಕುವ ಅವಶ್ಯಕತೆ ಇತ್ತೇ? ಬೇಕಂತ ಜನರನ್ನು ಸೆಳೆಯಲು ಇಂತಹ ಬಟ್ಟೆಗಳನ್ನು ಹಾಕಲಾಗಿದೆ ಎಂದು ನಟಿ ಹೇಳಿದ್ದರು. ಇದಕ್ಕೆ ಕ್ರಿತಿ ಸೆನೊನ್‌ ಕೂಡ ಕೌಂಟರ್‌ ಕೊಟ್ಟಿದ್ದು, ರಾಖಿ ಹಾಗೂ ಅದರ ಎಮೋಷನ್ಸ್‌ ಬಟ್ಟೆಯಲ್ಲಿಲ್ಲ. ಮನುಷ್ಯರನ್ನು ಹಾಗೂ ಭಾವನೆಗಳನ್ನು ಬಟ್ಟೆಯ ಮೂಲಕ ಅಳೆಯುವುದನ್ನು ನಿಲ್ಲಿಸಿ ಎಂದು ಹೇಳಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !