ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಆಧುನಿಕ ಕಾಲಘಟ್ಟದಲ್ಲಿ ಹಳ್ಳಿಯ ಹಸಿರು, ನೆಮ್ಮದಿಯ ಜೀವನ ಹಾಗೂ ಕೃಷಿಯನ್ನು ತೊರೆದು ನಗರದ, ಕಾರ್ಪೊರೇಟ್ ಉದ್ಯೋಗಗಳ ಅನ್ವೇಷಣೆಯಲ್ಲಿ ಓಡುವವರ ಸಂಖ್ಯೆ ದೊಡ್ಡದಿದೆ. ಇತ್ತೀಚಿನ ದಿನಗಳಲ್ಲಿ ನಗರದ ಜಂಜಾಟಕ್ಕೆ ಬೇಸತ್ತು ಮತ್ತೆ ಹಳ್ಳಿಗೆ ಮರಳಿ ಕೃಷಿಯತ್ತ ಮುಖ ಮಾಡುತ್ತಿರುವವರನ್ನು ನಾವು ನೋಡುತ್ತಿದ್ದೇವೆ. ಆದರೆ, ನಗರದ ಯಾವುದೇ ಆಕರ್ಷಣೆಗೆ ಒಳಗಾಗದೆ, ಹುಟ್ಟೂರಿನ ಮಣ್ಣಿನಲ್ಲೇ ನಿಂತು, ಪರಂಪರಾಗತ ಕೃಷಿಭೂಮಿಯಲ್ಲಿ ಅಚ್ಚುಕಟ್ಟಾಗಿ ದುಡಿಯುತ್ತಿರುವ ಯುವಕರ ಸಂಖ್ಯೆ ಕಡಿಮೆ. ಇಂತಹ ಅಪರೂಪದ ಕೃಷಿಪ್ರೇಮಿ ಯುವಕರಿಗೆ ದಾರಿದೀಪವಾಗಿದ್ದಾರೆ ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮಿಂಚಿನಡ್ಕ ಅಣಬೈಲಿನ ಪ್ರದೀಪ್.

ಕೃಷಿ ಪರಂಪರೆಯ ಕುಟುಂಬದಲ್ಲಿ ಜನಿಸಿದ ಇವರು ನೀರ್ಚಾಲು ಸಮೀಪದ ಅಣಬೈಲು ಸುಬ್ರಹ್ಮಣ್ಯ ಭಟ್, ಮಮತಾ ಇವರ ಪುತ್ರ.
ಕೃಷಿ ಭೂಮಿಯಲ್ಲಿ ನಿರಂತರ ಶ್ರಮ
ಅಣಬೈಲು ಪ್ರದೀಪ್ ಅವರು ತಮ್ಮ ಪಾರಂಪರಿಕ ಕೃಷಿ ಭೂಮಿಯನ್ನೇ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡಿದ್ದಾರೆ. ಕೃಷಿಯನ್ನು ಕೇವಲ ಒಂದು ಉಪಜೀವನದ ಮಾರ್ಗವನ್ನಾಗಿ ನೋಡದೆ, ಅದನ್ನೊಂದು ತಪಸ್ಸಿನಂತೆ ಸ್ವೀಕರಿಸಿ ಪ್ರತಿದಿನ ನಿರಂತರವಾಗಿ ದುಡಿಯುತ್ತಿದ್ದಾರೆ. ಶ್ರಮದಾನ ಮತ್ತು ಕಾಯಕ ನಿಷ್ಠೆಗೆ ಪ್ರದೀಪ್ ಅವರು ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.
ಸವಾಲನ್ನೇ ಸಾಧನೆಯಾಗಿಸಿದ ಭತ್ತದ ಬೇಸಾಯ
ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿ ಎಂದರೆ ಕೃಷಿಕರು ಹಿಂಜರಿಯುವುದು ಸಾಮಾನ್ಯವಾಗಿದೆ. ಕೆಲಸದಾಳುಗಳ ಕೊರತೆ, ಸಕಾಲಕ್ಕೆ ಗದ್ದೆ ಕೆಲಸಕ್ಕೆ ಆಳುಗಳು ಸಿಗದಿರುವುದು, ಹೆಚ್ಚುತ್ತಿರುವ ವೆಚ್ಚ ಹಾಗೂ ಹವಾಮಾನ ವೈಪರೀತ್ಯಗಳು ಬಲುದೊಡ್ಡ ಸವಾಲಾಗಿದೆ. ಆದರೆ ಈ ಯಾವುದೇ ಕಷ್ಟ-ಸವಾಲುಗಳಿಗೆ ಪ್ರದೀಪ್ ಹೆದರಲಿಲ್ಲ. ತಮ್ಮ ಸತತ ಶ್ರಮ ಮತ್ತು ಛಲದಿಂದ ಕೃಷಿಯಲ್ಲಿ ಇಳಿದ ಅವರು, ಸಾಮಾನ್ಯವಾಗಿ ಯಾರೂ ಸಾಹಸ ಮಾಡದ ರೀತಿಯಲ್ಲಿ ಬರೋಬ್ಬರಿ 2.5 ಎಕರೆ ಗದ್ದೆಯನ್ನು ಯಂತ್ರದ ಸಹಾಯದಿಂದ ಉಳುಮೆ ಮಾಡಿ ಭತ್ತ ಬೆಳೆದು ಭರ್ಜರಿ ಸಾಧನೆ ಮಾಡಿದ್ದಾರೆ.
`ಸ್ವಾವಲಂಬನೆ’ಗೆ ಹಿಡಿದ ಕೈಗನ್ನಡಿ :
ಪ್ರದೀಪ್ ಅವರ ಸಾಧನೆಯಲ್ಲಿ ಅತ್ಯಂತ ವಿಶೇಷವಾದ ಅಂಶವೆಂದರೆ `ಸ್ವಾವಲಂಬನೆ’. ಭತ್ತದ ಬೇಸಾಯದ ಪ್ರತಿಯೊಂದು ಹಂತದಲ್ಲೂ ಉಳುಮೆ, ನೇಜಿ ನೆಡೆವುದು, ನೀರು ನಿರ್ವಹಣೆ, ಕಳೆ ಕೀಳುವುದು ಹಾಗೂ ಕೊಯ್ಲಿನವರೆಗಿನ ಹೆಚ್ಚಿನ ಎಲ್ಲಾ ಕೆಲಸಗಳನ್ನು ತಾವೊಬ್ಬರೇ ನಿಂತು ನಿರ್ವಹಿಸಿದ್ದಾರೆ. “ಕಾಯಕವೇ ಕೈಲಾಸ” ಎಂಬ ನಾಣ್ಣುಡಿಗೆ ಪ್ರದೀಪ್ ಅವರ ಶ್ರಮಜೀವನ ಸೂಕ್ತ ಉದಾಹರಣೆಯಾಗಿದೆ. ಕೃಷಿಯಲ್ಲಿ ಕೆಲಸದಾಳುಗಳ ಕೊರತೆಯನ್ನು ನೆಪವಾಗಿಟ್ಟುಕೊಳ್ಳದೆ, ಸ್ವತಃ ತಾವೇ ದುಡಿದು ಸೈ ಎನಿಸಿಕೊಂಡಿದ್ದಾರೆ. ಇದಕ್ಕೆ ಕುಟುಂಬದವರ ಸಹಕಾರವೂ ಇದೆ.
ಇಂದಿನ ಯುವಜನತೆಗೆ ಮಾದರಿ :
ಕೃಷಿ ಎಂದರೆ ನಷ್ಟದ ಹಾದಿ, ಅದರಲ್ಲಿ ಗೌರವವಿಲ್ಲ ಎಂದು ಭಾವಿಸುವ ಇಂದಿನ ಯುವಜನತೆಗೆ ಪ್ರದೀಪ್ ಅವರ ಈ ಪಯಣ ಕಣ್ಣು ತೆರೆಸುವಂತಿದೆ. ಸ್ವಂತ ನೆಲದಲ್ಲಿ ಸ್ವಾವಲಂಬಿ ಜೀವನ ನಡೆಸುವುದು ಹೇಗೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪರಂಪರಾಗತ ಕೃಷಿ ಭೂಮಿಯನ್ನು ಜೀವಂತವಾಗಿಟ್ಟುಕೊಳ್ಳುವಲ್ಲಿ ಯುವಕರ ಪಾತ್ರ ಎಷ್ಟು ಮುಖ್ಯ ಎಂಬುದಕ್ಕೆ ಇವರ ಸಾಧನೆಯೇ ಸಾಕ್ಷಿಯಾಗಿದೆ.
ಕಾಸರಗೋಡಿನ ಮಣ್ಣಿನ ಸೌರಭವನ್ನು ತಮ್ಮ ಬೆವರಿನ ಹನಿಗಳಿಂದ ಮತ್ತಷ್ಟು ಹೆಚ್ಚಿಸಿರುವ ಅಣಬೈಲು ಪ್ರದೀಪ ಶಂಕರ ಅವರ ಈ ಕೃಷಿ ಪ್ರೀತಿ ಮತ್ತು ಕಾಯಕ ನಿಷ್ಠೆ ನಿಜಕ್ಕೂ ಶ್ಲಾಘನೀಯ. ನಗರದ ಯಾಂತ್ರಿಕ ಜೀವನಕ್ಕಿಂತ ಹಳ್ಳಿಯ ಮಣ್ಣಿನ ಸತ್ವದಲ್ಲಿ ನಂಬಿಕೆಯಿಟ್ಟು ಸಾಧನೆ ಮಾಡುತ್ತಿರುವ ಪ್ರದೀಪ್ ಅವರ ಕೃಷಿ ಪಯಣವು ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿದೆ.
ಪ್ರಸ್ತುತ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಕ್ಲರ್ಕ್ ಹುದ್ದೆಯನ್ನು ನಿರ್ವಹಿಸುತ್ತಾ ತಮ್ಮ ಕೃಷಿಭೂಮಿಯಲ್ಲಿ ಕುಟುಂಬದೊಂದಿಗೆ ವಿವಿಧ ತರಕಾರಿ ಗಿಡಗಳನ್ನೂ ಬೆಳೆಸಿರುತ್ತಾರೆ. ಅಳಸಂಡೆ, ಬೆಂಡೆ, ತೊಂಡೆಕಾಯಿ, ಕುಂಬಳಕಾಯಿ, ಸೊರೆಕಾಯಿ ಮೊದಲಾದ ತರಕಾರಿಗಳನ್ನೂ ಕೃಷಿ ಮಾಡುತ್ತಿದ್ದಾರೆ. ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್ ಮೊದಲಾದ ಬೆಳಗಳನ್ನು ಬೆಳೆಯಲು ಇವರು ಮನೆಯವರೊಂದಿಗೆ ನಿರಂತರ ಸಹಕರಿಸುತ್ತಿದ್ದಾರೆ.
ತಂದೆ ಅಣಬೈಲು ಸುಬ್ರಹ್ಮಣ್ಯ ಭಟ್ಟರು ಕೃಷಿಯೊಂದಿಗೆ ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲೂ ತೊಡಗಿದ್ದಾರೆ. ಸಹೋದರ ಪ್ರಶಾಂತ್ ಅವರೂ ಇವರೊಂದಿಗೆ ಕೈಜೋಡಿಸುತ್ತಾರೆ.
ಜೇನುಕೃಷಿಯಲ್ಲೂ ಎತ್ತಿದ ಕೈ :
ಕೇವಲ ಭತ್ತದ ಬೇಸಾಯವಷ್ಟೇ ಅಲ್ಲದೆ, ಪ್ರದೀಪ್ ಶಂಕರ ಅವರು ಜೇನುಕೃಷಿಯಲ್ಲೂ ತಮ್ಮ ಕೈಚಳಕವನ್ನು ತೋರಿದ್ದಾರೆ. ಆಧುನಿಕ ಕೃಷಿಯೊಂದಿಗೆ ಸಾಂಪ್ರದಾಯಿಕ ಪದ್ಧತಿಗಳನ್ನು ಮೈಗೂಡಿಸಿಕೊಂಡು ಜೇನುಸಾಕಣೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಸಹಜ ಕೃಷಿಗೆ ಪೂರಕ :
ಜೇನುಕೃಷಿಯು ಕೇವಲ ಆರ್ಥಿಕ ಲಾಭದಾಯಕ ವರಮಾನ ಮಾತ್ರವಲ್ಲದೆ, ಕೃಷಿ ಜಮೀನಿನಲ್ಲಿ ಪರಾಗಸ್ಪರ್ಶ ಕ್ರಿಯೆಗೂ ಅತ್ಯಂತ ಸಹಕಾರಿಯಾಗಿದೆ. ಇದನ್ನು ಅರಿತಿರುವ ಪ್ರದೀಪ್ ಅವರು ತಮ್ಮ ತೋಟದಲ್ಲಿ ಜೇನುಪೆಟ್ಟಿಗೆಗಳನ್ನು ಅಳವಡಿಸಿ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಯಾವುದೇ ಕೃತಕ ಅಂಶಗಳಿಲ್ಲದ, ಸಂಪೂರ್ಣ ಶುದ್ಧ ಮತ್ತು ನೈಸರ್ಗಿಕ ಜೇನುತುಪ್ಪವನ್ನು ಉತ್ಪಾದಿಸುವ ಮೂಲಕ ಸ್ಥಳೀಯ ಗ್ರಾಹಕರಿಗೆ ಆರೋಗ್ಯಕರ ಉತ್ಪನ್ನವನ್ನು ನೀಡುತ್ತಿದ್ದಾರೆ.
ಭತ್ತದ ಗದ್ದೆಯ ಕೆಸರಿನಲ್ಲಿ ಬೆವರು ಹರಿಸುವುದರೊಂದಿಗೆ, ಜೇನುತುಪ್ಪದ ಮೂಲಕ ತಮ್ಮ ಬದುಕಿನಲ್ಲಿ ಸವಿ ತುಂಬಿಕೊಳ್ಳುತ್ತಿರುವ ಪ್ರದೀಪ ಅವರ ಈ ಬಹುಮುಖಿ ಕೃಷಿ ಪ್ರೀತಿ ಇಡೀ ಪ್ರದೇಶದ ಜನತೆಗೆ ಸ್ಫೂರ್ತಿದಾಯಕವಾಗಿದೆ.



