ಹೊಸದಿಗಂತ ವರದಿ ಪಾವಗಡ:
ರೈತ ಹೆಚ್.ಪಿ.ಕೃಷ್ಣಪ್ಪ ರವರಿಗೆ ಸೇರಿದ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಮಚ್ಚಿನಿಂದ ಕತ್ತರಿಸಿ ನಾಶಪಡಿಸಿರುವ ಕೃತ್ಯ ಬೆಳಕಿಗೆ ಬಂದಿದೆ. ಈ ಘಟನೆಯು ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೋಡಿ ಅಚ್ಚಮ್ಮನಹಳ್ಳಿ ಸರ್ವೆ ನಂಬರ್ 8/1 ರ ವ್ಯಾಪ್ತಿಯ ಮೇಗಳಪಾಳ್ಯ ಗ್ರಾಮದ ಪಕ್ಕದಲ್ಲಿರುವ ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿರುವ ಜಮೀನಿನಲ್ಲಿ ನಡೆದಿದೆ.
ಕೈಗೆ ಬಂದ ಬೆಳೆ ನಾಶ: ಲಕ್ಷಾಂತರ ರೂಪಾಯಿ ನಷ್ಟ
ವೈ.ಎನ್.ಹೊಸಕೋಟೆ ಗ್ರಾಮದ ರೈತ ಹೆಚ್.ಪಿ.ಕೃಷ್ಣಪ್ಪ ಎಂಬುವವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆಸಿದ್ದ ಸುಮಾರು 63ಕ್ಕೂ ಹೆಚ್ಚಿನ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಮಚ್ಚಿನಿಂದ ಕತ್ತರಿಸಿ ಹಾಳುಮಾಡಿದ್ದಾರೆ. ಬೇವರು ಹರಿಸಿ ಬೆಳೆಸಿದ ಗಿಡಗಳು ಕಣ್ಣೆದುರೇ ನಾಶವಾಗಿರುವುದನ್ನು ಕಂಡು ರೈತ ಕೃಷ್ಣಪ್ಪ ತೀವ್ರ ಕಣ್ಣೀರಿಟ್ಟಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ವೈ.ಎನ್.ಹೊಸಕೋಟೆ ಪೊಲೀಸರು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.



