ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್ಸೆಲ್ ಗ್ರೂಪ್ 100 ವರುಷಗಳನ್ನು ಪೂರೈಸಿದ ಸಂಭ್ರಮದ ಅಂಗವಾಗಿ ಜೀ ಕನ್ನಡ ವತಿಯಿಂದ ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕನ್ನಡ ಸಿನಿಮಾ ಮತ್ತು ಕಿರುತೆರೆಯ ದಿಗ್ಗಜರು, ಬರಹಗಾರರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ಜೀ ಕನ್ನಡ ಕುಟುಂಬದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಜೊತೆ ಎಸ್ಸೆಲ್ ಗ್ರೂಪ್ ಹೊಂದಿರುವ ಸುದೀರ್ಘ ನಂಟು ಮತ್ತು ಅದರ 100 ವರ್ಷಗಳ ಅದ್ಭುತ ಪಯಣವನ್ನು ಈ ಸಂದರ್ಭದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್ಸೆಲ್ ಗ್ರೂಪ್ ಅಧ್ಯಕ್ಷರಾದ ಡಾ. ಸುಭಾಷ್ ಚಂದ್ರ ಹಾಗೂ ಕನ್ನಡ ಚಿತ್ರರಂಗದ ಪ್ರಮುಖರಾದ ಡಾ. ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಮಾಳವಿಕಾ ಅವಿನಾಶ್, ಸಿಹಿ ಕಹಿ ಚಂದ್ರು, ಜಗ್ಗೇಶ್, ರಾಜೇಶ್ ಕೃಷ್ಣನ್, ಡಾಲಿ ಧನಂಜಯ್, ವಿಜಯ ರಾಘವೇಂದ್ರ, ನಿಶ್ವಿಕಾ ನಾಯ್ಡು, ತಾರಾ ಅನುರಾಧಾ, ಛಾಯಾ ಸಿಂಗ್, ರಾಜೇಶ್ ನಟರಂಗ, ತರುಣ್ ಸುಧೀರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಜೊತೆಗೆ, ಜೀ ಕನ್ನಡದ ಜನಪ್ರಿಯ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಕಲಾವಿದರು ಕೂಡ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಾ. ಸುಭಾಷ್ ಚಂದ್ರ ಅವರು, 1926ರಲ್ಲಿ ಆರಂಭವಾದ ಎಸ್ಸೆಲ್ ಗ್ರೂಪ್‌ನ ಸುದೀರ್ಘ ಹಾಗೂ ಅದ್ಭುತ ಪಯಣವನ್ನು ಮೆಲುಕು ಹಾಕಿದರು. ಮಾತನಾಡಿದ ಡಾ. ಸುಭಾಷ್ ಚಂದ್ರ ಅವರು, 1926ರಲ್ಲಿ ಆರಂಭವಾದ ಎಸ್ಸೆಲ್ ಗ್ರೂಪ್‌ನ ಅದ್ಭುತ ಪಯಣವನ್ನು ನೆನಪಿಸಿಕೊಂಡರು. 1970ರಲ್ಲಿ ಕೇವಲ 17 ರೂಪಾಯಿಗಳ ಬಂಡವಾಳದೊಂದಿಗೆ ತಾವು ಕಂಡ ಕನಸು, ಇಂದು ಕೋಟ್ಯಂತರ ಜನರನ್ನು ತಲುಪುವ ದೊಡ್ಡ ಜಾಗತಿಕ ಸಂಸ್ಥೆಯಾಗಿ ಬೆಳೆದುಬಂದ ಬಗೆಯನ್ನು ವಿವರಿಸಿದರು. ತಾವು ಎಷ್ಟೋ ಸವಾಲುಗಳನ್ನು ಎದುರಿಸಿ ಸಾಧಿಸಿದ ಈ ಯಶಸ್ಸಿನ ಹಾದಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕರ್ನಾಟಕದ ಜನರ ಬಗ್ಗೆ ಮಾತನಾಡುತ್ತಾ, ಕನ್ನಡಿಗರು ತುಂಬಾ ಪ್ರತಿಭಾವಂತರು ಎಂದರು. ಜೀ ಎಂಟರ್‌ಟೈನ್‌ಮೆಂಟ್‌ನ ಜಾಗತಿಕ ಕಂಟೆಂಟ್ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರು ಬೆಳೆದುಬಂದ ಹಾದಿಯನ್ನು ಉಲ್ಲೇಖಿಸಿ, ಇದು ಕನ್ನಡಿಗರ ಪ್ರತಿಭೆಗೆ ಹಿಡಿದ ಕನ್ನಡಿ ಎಂದರು.
ಜೀ ಎಂಟರ್‌ಟೈನ್‌ಮೆಂಟ್‌ನ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಮಾತನಾಡಿ, “100 ವರ್ಷಗಳ ಈ ಹೆಮ್ಮೆಯ ಪಯಣದ ಭಾಗವಾಗಿರುವುದು ನಮಗೆ ನಿಜಕ್ಕೂ ಸಂತೋಷ ಮತ್ತು ಹೆಮ್ಮೆಯ ವಿಷಯ. ಜೀ ಕನ್ನಡವು ಸದಾ ಕನ್ನಡಿಗರೊಂದಿಗೆ ಗಟ್ಟಿಯಾದ ಬಾಂಧವ್ಯ ಹೊಂದಿದೆ. ನಮ್ಮ ವೀಕ್ಷಕರ ಪ್ರೀತಿ ಮತ್ತು ವಿಶ್ವಾಸವೇ ನಮ್ಮ ಈ ಯಶಸ್ಸಿಗೆ ಮುಖ್ಯ ಕಾರಣ. ಕನ್ನಡದ ಕಥೆಗಳು ಮತ್ತು ಪ್ರತಿಭೆಗಳನ್ನು ಇನ್ನಷ್ಟು ದೊಡ್ಡ ಜಾಗತಿಕ ವೇದಿಕೆಗಳಿಗೆ ಕೊಂಡೊಯ್ಯಲು ನಾವು ಸದಾ ಸಿದ್ಧರಿದ್ದೇವೆ” ಎಂದರು.
ಹಾಗೆಯೇ, ಜೀ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, ನಮ್ಮ ವೀಕ್ಷಕರ ಬೆಂಬಲ ಹಾಗೂ ಕಲಾವಿದರು, ತಂತ್ರಜ್ಞರ ಶ್ರಮದಿಂದಲೇ ಜೀ ಕನ್ನಡ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ ಎಂದರು.
ಚಾನೆಲ್‌ನ ಬೆಳವಣಿಗೆಗೆ ಶ್ರಮಿಸಿದ ಕಲಾವಿದರು, ಬರಹಗಾರರು, ನಿರ್ದೇಶಕರು ಮತ್ತು ತಂತ್ರಜ್ಞರನ್ನು ಈ ವೇಳೆ ಗುರುತಿಸಿ ಸನ್ಮಾನಿಸಲಾಯಿತು. ಜೀ ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮದೇ ಆದ ಚಾರ್ಮ್ ನಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಎಸ್ಸೆಲ್ ಗ್ರೂಪ್‌ನ ಈ ನೂರು ವರ್ಷಗಳ ಆಚರಣೆಯು ಕನ್ನಡಿಗರೊಂದಿಗೆ ತನಗಿರುವ ಅವಿನಾಭಾವ ಸಂಬಂಧವನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು. ಕನ್ನಡದ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ತನ್ನ ಬದ್ಧತೆಯನ್ನು ಜೀ ಕನ್ನಡ ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿತು.



