August 26, 2026
Wednesday, August 26, 2026
spot_img

ಹಣಕ್ಕಾಗಿ ಕಿರುಕುಳ, ಹಲ್ಲೆ: ಡೆತ್‌ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹ*ತ್ಯೆ

ಹೊಸದಿಗಂತ ವರದಿ ಹಾಸನ:

ಡೆತ್‌ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಹೊರವಲಯದ ಗುಡ್ಡೇನಹಳ್ಳಿಯಲ್ಲಿ ನಡೆದಿದೆ.

ಸಕಲೇಶಪುರ ತಾಲ್ಲೂಕಿನ ನಡಹಳ್ಳಿ ಗ್ರಾಮದ ಮದನ್ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹಾಸನದಲ್ಲಿ ದ್ವಿತೀಯ ವರ್ಷದ ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಮದನ್ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ.

ಹಾಸ್ಟೆಲ್ ಹೊರಗೆ ಪರಿಚಯವಾಗಿದ್ದ ಪವನ್, ಪ್ರೀತಂ ಹಾಗೂ ಇಬ್ಬರು ಅಪ್ರಾಪ್ತರು ಹಣಕ್ಕಾಗಿ ತನ್ನನ್ನು ಪೀಡಿಸುತ್ತಿದ್ದರು ಎಂದು ಮದನ್ ಈ ಹಿಂದೆ ತಾಯಿಗೆ ತಿಳಿಸಿದ್ದ ಎನ್ನಲಾಗಿದೆ. ಬಳಿಕ ನಾಲ್ವರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದ ಮದನ್ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.

ಭಾನುವಾರ ರಾತ್ರಿ ಹಾಸ್ಟೆಲ್ ಎದುರಿನ ಬೇಕರಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ ನಾಲ್ವರು ಮತ್ತೆ ಹಣ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮದನ್ ತನ್ನ ತಾಯಿ ಶೋಭ ಅವರಿಗೆ ಕರೆ ಮಾಡಿ ತಿಳಿಸಿದ್ದು, ತಾಯಿ 1,000 ರೂಪಾಯಿ ಗೂಗಲ್ ಪೇ ಮೂಲಕ ಕಳುಹಿಸಿದ್ದರು. ಬಳಿಕ ಪವನ್ ಮದನ್ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಘಟನೆಯಿಂದ ಆತಂಕಗೊಂಡ ತಾಯಿ ಮಧ್ಯರಾತ್ರಿ ಹಾಸ್ಟೆಲ್‌ಗೆ ಆಗಮಿಸಿದಾಗ ಮದನ್ ಕಾಣೆಯಾಗಿದ್ದರು. ಸೋಮವಾರ ಬೆಳಗ್ಗೆ ಹಾಸ್ಟೆಲ್‌ನ ಟೆರೆಸ್‌ನಲ್ಲಿ ಬೆಡ್‌ಶೀಟ್‌ನಿಂದ ಕಬ್ಬಿಣದ ಏಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಆತ್ಮಹತ್ಯೆಗೂ ಮುನ್ನ ಮದನ್ ಡೆತ್‌ನೋಟ್ ಬರೆದಿದ್ದು, ತಮ್ಮ ಸಾವಿಗೆ ಪವನ್, ಪ್ರೀತಂ ಹಾಗೂ ಇಬ್ಬರು ಅಪ್ರಾಪ್ತರು ಕಾರಣ ಎಂದು ಆರೋಪಿಸಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !