ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಹೆದ್ದಾರಿ ಬದಿ ಹಾಗೂ ನೀರು ಹರಿಯುವ ತೋಡಿನಲ್ಲಿ ವಧೆಗೈದ ಜಾನುವಾರಿನ ಅವಶೇಷ, ತ್ಯಾಜ್ಯದ ರಾಶಿ ಬುಧವಾರ ಪತ್ತೆಯಾಗಿದ್ದು, ಈ ಕುರಿತು ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಧೆಗೈದ ಕರುವಿನ ಮುಖ, ಗೋವುಗಳ ಮೂಳೆ ಹಾಗೂ ಶರೀರದ ವಿವಿಧ ಅಂಗಗಳು ಹಾಗೂ ಕೋಳಿಯ ಕಾಲುಗಳ ಸಹಿತ ಸುಮಾರು ಒಂದು ಲೋಡಿನಷ್ಟು ತ್ಯಾಜ್ಯಗಳನ್ನು ಯಾವುದೋ ವಾಹನದಲ್ಲಿ ತಂದು ಮೋರಿಯ ಕೆಳಗೆ ಹರಿಯುವ ನೀರಿಗೆ ಹಾಗೂ ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಈ ಕೃತ್ಯ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಬುಧವಾರ ಬೆಳಿಗ್ಗೆ ತ್ಯಾಜ್ಯದ ರ್ದುವಾಸನೆಗೆ ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ನೀರು ಹರಿಯುವ ತೋಡು ಹಾಗೂ ಅದರ ಪಕ್ಕ ಗೋವಿನ ಹಾಗೂ ಕೋಳಿಯ ತ್ಯಾಜ್ಯಗಳು, ವಧೆಗೈದ ಒಂದು ಕರುವಿನ ಮುಖ ಕಂಡು ಬಂದಿದ್ದು, ಇದರಿಂದಾಗಿ ಸ್ಥಳೀಯರು ಆಕ್ರೋಶಿತರಾಗಿದ್ದಾರೆ. ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಯಲ್ಲಿ ಗೋವನ್ನು ವಧೆಗೈದು ಅವುಗಳ ತ್ಯಾಜ್ಯವನ್ನು ತಂದು ಇಲ್ಲಿ ಎಸೆಯಲಾಗಿದೆ ಯಂದು ಸ್ಥಳೀಯರು ಶಂಕಿಸಿದ್ದಾರೆ.
ಈ ಬಗ್ಗೆ ನಾವೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಸದಾನಂದ ನಾವೂರು ಅವರು ಪೊಲೀಸರಿಗೆ ಹಾಗೂ ಗ್ರಾ.ಪಂ. ಪಿಡಿಒಗೂ ಮಾಹಿತಿ ನೀಡಿದಲ್ಲದೆ ವೈಜ್ಞಾನಿಕ ಪರೀಕ್ಷೆಯ ಮೂಲಕ ಅವು ಯಾವ ಪ್ರಾಣಿಯ ಅವಶೇಷಗಳು ಎಂಬುದನ್ನು ಖಚಿತಪಡಿಸಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ. ತ್ಯಾಜ್ಯವನ್ನು ಎಸೆದಿರುವ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಪಿಡಿಒ, ಪೊಲೀಸರಿಂದ ಸ್ಥಳ ಭೇಟಿ
ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು, ನಾವೂರು ಗ್ರಾ.ಪಂ.ನ ಪಿಡಿಒ ಹಾಗೂ ಪಶುವೈದ್ಯಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಪಿಡಿಒ ಅವರ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



