August 26, 2026
Wednesday, August 26, 2026
spot_img

ರೇಷ್ಮೆ ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನಕ್ಕೇರಲು ರೈತರು-ವಿಜ್ಞಾನಿಗಳು ಶ್ರಮಿಸಬೇಕು: ಸಂಸದ ಗೋವಿಂದ ಕಾರಜೋಳ

ಹೊಸದಿಗಂತ ವರದಿ ಚಿತ್ರದುರ್ಗ:

ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.  ಕಠಿಣ ಶ್ರಮ ಹಾಗೂ ತಾಂತ್ರಿಕ ಸಂಶೋಧನೆಗಳ ಮೂಲಕ ಭಾರತ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೇರುವಂತೆ ರೈತರು ಹಾಗೂ ವಿಜ್ಞಾನಿಗಳು ಶ್ರಮಿಸಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ನಗರದ ರೇಷ್ಮೆ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನನ್ನ ರೇಷ್ಮೆ ನನ್ನ ಹೆಮ್ಮೆ’ ಅಭಿಯಾನದಡಿ ರೈತರು ಮತ್ತು ವಿಜ್ಞಾನಿಗಳ ನಡುವಿನ ಸಂವಾದ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗದ ಮಾರಗಟ್ಟದಲ್ಲಿ ಇಲ್ಲಿಯವರೆಗೆ ಕಾರ್ಯ ನಿರ್ವಹಿಸುತ್ತಿದ್ದ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರ ವಿಸ್ತರಣ ಕೇಂದ್ರವನ್ನು ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. 1982ರಲ್ಲಿ ಪ್ರಾರಂಭವಾದ ಚಿತ್ರದುರ್ಗ ತಾಲ್ಲೂಕಿನ ಮಾರಗಟ್ಟದಲ್ಲಿರುವ ರೇಷ್ಮೆ ಸಂಶೋಧನಾ ವಿಸ್ತರಣ ಕೇಂದ್ರವು ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಮೂರು ಜಿಲ್ಲೆಗಳ ರೇಷ್ಮೆ ಬೆಳೆಗಾರರ ಅಗತ್ಯತೆಗಳನ್ನು ಪೂರೈಸುತ್ತಿತ್ತು. ಬೆಂಗಳೂರಿನ ಸರ್ಜಾಪುರದ ಬಳಿಯ ಕೊಡತಿಯಿಂದ ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ  ಕೇಂದ್ರವನ್ನು ಚಿತ್ರದುರ್ಗದ ಮಾರಗಟ್ಟಕ್ಕೆ ಸ್ಥಳಾಂತರಿಸಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಿದರು. 

ಚಿತ್ರದುರ್ಗದ ಮಾರಗಟ್ಟದಲ್ಲಿದ್ದ ಸಂಶೋಧನಾ ವಿಸ್ತರಣಾ ಕೇಂದ್ರವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಮಾರಗಟ್ಟದ ಈ ಕೇಂದ್ರವು ತಾಂತ್ರಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಕಾರ್ಯಾರಂಭ ಮಾಡಿದೆ. ಚಿತ್ರದುರ್ಗದ ಈ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರವು 10 ಉಪ-ಘಟಕಗಳ ತಾಂತ್ರಿಕ ಚಟುವಟಿಕೆಗಳನ್ನು ಮತ್ತು ಉತ್ತರ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 03 ಘಟಕಗಳನ್ನು ಅಂದರೆ ರಾಣಿಬೆನ್ನೂರು, ಕೊಪ್ಪಳ ಮತ್ತು ಬೀದರ್ ನಲ್ಲಿರುವ ಸಂಶೋಧನಾ ವಿಸ್ತರಣ ಕೇಂದ್ರಗಳನ್ನು ಸಮನ್ವಯಗೊಳಿಸುತ್ತದೆ. ಇದರ ಜತೆಗೆ ದಕ್ಷಿಣ ಕರ್ನಾಟಕದ ಎರಡು ಘಟಕಗಳಾದ ಮದ್ದೂರು ಮತ್ತು ಮಡಿವಾಳ ಘಟಕಗಳೂ ಸಹ ಚಿತ್ರದುರ್ಗ ಕೇಂದ್ರದ ವ್ಯಾಪ್ತಿಗೆ ಬಳಪಡುತ್ತವೆ. ಇದರ ಜತೆಗೆ ಮಹಾರಾಷ್ಟ್ರದ ನಾಲ್ಕು ಮತ್ತು ಮಧ್ಯಪ್ರದೇಶದ ಒಂದು ರೇಷ್ಮೆ ವಿಸ್ತರಣಾ ಕೇಂದ್ರಗಳು ಚಿತ್ರದುರ್ಗದ  ಕೇಂದ್ರದ ವ್ಯಾಪ್ತಿಗೆ ಒಳಪಡಲಿವೆ ಎಂದು ತಿಳಿಸಿದರು.

ಇದನ್ನೂ ಓದಿ:

ಸರ್ವಜ್ಞನ ʼಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲುʼ ಎಂಬ ನುಡಿಯಂತೆ, ರೈತ ಬೆಳೆಯನ್ನು ಬೆಳೆಯದಿದ್ದರೆ ನಮಗೆ ಉಣ್ಣಲು ಅನ್ನವೂ ಇರುವುದಿಲ್ಲ, ಮಾನ ಮುಚ್ಚಲು ಬಟ್ಟೆಯೂ ಸಿಗುವುದಿಲ್ಲ. ಪ್ರತಿಯೊಂದು ರಂಗಕ್ಕೂ ಕೃಷಿಯೇ ಮೂಲಾಧಾರ. ನಮ್ಮ ಪೂರ್ವಜರು ನಮಗಾಗಿ ಬಿಟ್ಟುಹೋದ ಭೂಮಿಯನ್ನು ರಿಯಲ್ ಎಸ್ಟೇಟ್ ಹೆಸರಿನಲ್ಲಿ ಮಾರಾಟ ಮಾಡದೆ, ಅದನ್ನು ಫಲವತ್ತಾಗಿಸಿ 140 ಕೋಟಿ ದೇಶವಾಸಿಗಳಿಗೆ ಅನ್ನ ನೀಡುವ ಪವಿತ್ರ ಕಾಯಕದಲ್ಲಿ ನಿರತರಾಗಬೇಕು.

ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಬೋಜಣ್ಣ, ಕೇಂದ್ರ ರೇಷ್ಮೆ ಮಂಡಳಿ ಚಿತ್ರದುರ್ಗ ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ವೈ.ಶ್ರೀನಿವಾಸಲು, ಪ್ರಶಾಂತ್, ರೇಷ್ಮೆ ಸಹಾಯಕ ನಿರ್ದೇಶಕಿ ಉಷಾ ಸೇರಿದಂತೆ ರೇಷ್ಮೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೇಷ್ಮೆ ಬೆಳೆಗಾರ ರೈತರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !