August 26, 2026
Wednesday, August 26, 2026
spot_img

ಓಣಂಗೆ ಹೊಸ ಲುಕ್ ನೀಡಿದ ಪೊಲೀಸ್ ಇಲಾಖೆ: ಮಾವೇಲಿ ವೇಷದಲ್ಲಿ ರಸ್ತೆಗಿಳಿದ ಆದೂರು ಠಾಣೆಯ ಎಎಸ್ಸೈ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳಂನಲ್ಲಿ ಓಣಂ ಹಬ್ಬದ ಸಂಭ್ರಮದ ನಡುವೆ ಕಾಸರಗೋಡಿನ ಆದೂರು ಠಾಣೆಯ ಪೊಲೀಸರು ವಿಭಿನ್ನ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರ ಗಮನಸೆಳೆದಿದ್ದಾರೆ!

ಇಲ್ಲಿನ ಠಾಣೆಯ ಎಎಸ್‌ಐ ರಾಮಚಂದ್ರನ್ ನಾಯರ್ ಅವರು ಮಾವೇಲಿ ವೇಷ ಧರಿಸಿ ರಸ್ತೆಗಿಳಿದು ಸಂಚಾರ ನಿಯಮಗಳು ಹಾಗೂ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಓಣಂ ಸಂದರ್ಭದಲ್ಲಿ ಕೇರಳದ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗುವುದರಿಂದ ಅಪಘಾತ ಹಾಗೂ ಸಂಚಾರ ದಟ್ಟಣೆಯ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಆದೂರು ಪೊಲೀಸರು ಹಬ್ಬದ ಸಂಭ್ರಮದ ಜತೆಗೆ ರಸ್ತೆ ಸುರಕ್ಷತೆ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನೂ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮಾವೇಲಿ ವೇಷದಲ್ಲಿ ಪೊಲೀಸ್ ಅಧಿಕಾರಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರ ಗಮನ ಸೆಳೆಯಿತು. ವಾಹನ ಚಾಲಕರು ಮತ್ತು ಸಾರ್ವಜನಿಕರಿಗೆ ಹೆಲ್ಮೆಟ್ ಧರಿಸುವುದು, ಸೀಟ್‌ಬೆಲ್ಟ್ ಬಳಸುವುದು, ಅತಿವೇಗದ ಚಾಲನೆ ತಪ್ಪಿಸುವುದು ಹಾಗೂ ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸದಿರುವುದು ಸೇರಿದಂತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಯಿತು.

ಇದನ್ನೂ ಓದಿ:

ಇದರ ಜೊತೆಗೆ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಮಾದಕ ದ್ರವ್ಯಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.

ಸ್ಟೇಷನ್ ಹೌಸ್ ಅಧಿಕಾರಿ ಕೆ.ಜಿ. ರತೀಶ್ ಮತ್ತು ಸಬ್ ಇನ್‌ಸ್ಪೆಕ್ಟರ್ ಕೆ. ಶರತ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !