October 12, 2026
Monday, October 12, 2026
spot_img

ನೇಪಾಳದಲ್ಲಿ ಭಾರೀ ಪ್ರವಾಹ: 468 ಪ್ರವಾಸಿಗರ ರಕ್ಷಣೆಗೆ ಸಮರೋಪಾದಿ ಕಾರ್ಯಾಚರಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ಬಳಿಕ ಸುಮಾರು 468 ಪ್ರವಾಸಿಗರು ಮತ್ತು ಪ್ರಯಾಣಿಕರ ಸಂಪರ್ಕಕ ಕಡಿತಗೊಂಡಿದ್ದು, ಅವರನ್ನು ರಕ್ಷಿಸಲು ಸರ್ಕಾರ ಮತ್ತು ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

ನೇಪಾಳದ ಪ್ರವಾಸೋದ್ಯಮ ಇಲಾಖೆಯ ವಕ್ತಾರ ಸೂರಜ್ ಘಿಮಿರೆ ಅವರು ಮಾತನಾಡಿ, “ಪ್ರವಾಹದ ನಂತರ ಸುಮಾರು 468 ಪ್ರವಾಸಿಗರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇವರಲ್ಲಿ 393 ಜನರು ವಿದೇಶಿಯರಾಗಿದ್ದು, 75 ಜನರು ನೇಪಾಳದ ಸ್ಥಳೀಯ ಪ್ರಯಾಣಿಕರಾಗಿದ್ದಾರೆ.” ಎಂದು ಮಾಹಿತಿ ನೀಡಿದ್ದಾರೆ.

ದುರಂತ ಸಂಭವಿಸಿದ ಹಿಮಾಲಯ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿರುವುದರಿಂದ ಪ್ರವಾಸಿಗರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರವಾಸಿಗರು ದುರ್ಗಮ ಬೆಟ್ಟದ ಪ್ರದೇಶಗಳು ಅಥವಾ ಎತ್ತರದ ಸುರಕ್ಷಿತ ತಂಗುದಾಣಗಳಲ್ಲಿ ಆಶ್ರಯ ಪಡೆದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮೇಲ್ನೋಟಕ್ಕೆ ಅಂದಾಜಿಸಿದ್ದಾರೆ.

ಪ್ರವಾಸಿಗರ ಕುಟುಂಬಸ್ಥರಿಗೆ ಸೂಕ್ತ ಮಾಹಿತಿ ನೀಡುವುದಕ್ಕಾಗಿ ಹಾಗೂ ಸಹಾಯ ಕೋರಲು ನೇಪಾಳ ಸರ್ಕಾರ ಮತ್ತು ಪ್ರವಾಸೋದ್ಯಮ ಮಂಡಳಿಯು ವಿಪತ್ತು ನಿರ್ವಹಣಾ ಹೆಲ್ಪ್‌ಲೈನ್ ಸಂಖ್ಯೆಗಳನ್ನು ತೆರೆದಿದ್ದು, ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತ ಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ.

ಇಲ್ಲಿವರೆಗೂ ಮೃತಪಟ್ಟವರ ಸಂಖ್ಯೆ ಎಷ್ಟು?

ಪ್ರವಾಹದಿಂದಾಗಿ ಈವರೆಗೆ ಕನಿಷ್ಠ 160ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಸುಮಾರು 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

Must Read