October 11, 2026
Sunday, October 11, 2026
spot_img

ಚುನಾವಣಾ ಆಯುಕ್ತರ ರಾಜೀನಾಮೆಗೆ ಪಟ್ಟು: ನಾಳೆ ಸುಪ್ರೀಂ ಕೋರ್ಟ್‌ಗೆ ವಿಪಕ್ಷಗಳ ಪಾದಯಾತ್ರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮತಗಳ್ಳತನದ ಆರೋಪ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ನಡುವೆಯೇ, ಇಂಡಿಯ ಮೈತ್ರಿಕೂಟದ ವಿರೋಧ ಪಕ್ಷದ ನಾಯಕರು ಸೋಮವಾರ ಸುಪ್ರೀಂ ಕೋರ್ಟ್ ಕಡೆಗೆ ಮೆರವಣಿಗೆ ನಡೆಸಲು ಸಜ್ಜಾಗಿವೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ. ‘ವೋಟ್ ಚೋರಿ’ ವಿವಾದದ ಕುರಿತು ಮನವಿ ಸಲ್ಲಿಸಿ ನ್ಯಾಯಾಂಗದ ಗಮನ ಸೆಳೆಯುವುದು ಅವರ ಉದ್ದೇಶವಾಗಿದೆ.

ಬೇಡಿಕೆ ಏನು?

ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ಸೋಮವಾರ ಸಂಜೆ 4ರಿಂದ 5 ಗಂಟೆಯ ನಡುವೆ ಭೇಟಿಗೆ ಅವಕಾಶ ನೀಡುವಂತೆ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ದೇಶದಲ್ಲಿ ಮತಗಳ್ಳತನ ನಡೆಯುತ್ತಿದೆ ಎಂಬ ಆರೋಪದ ಕುರಿತು ಕ್ರಮ ಕೈಗೊಳ್ಳಬೇಕು, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ನಿಲ್ಲಿಸಬೇಕು ಹಾಗೂ ಮತಪತ್ರಗಳ ಮೂಲಕ ಚುನಾವಣೆ ನಡೆಸುವ ವ್ಯವಸ್ಥೆಗೆ ಮರಳಬೇಕು ಎಂಬ ಬೇಡಿಕೆಗಳನ್ನು ಪ್ರತಿಪಕ್ಷಗಳು ಮುಂದಿಟ್ಟಿವೆ.

ಮಾರ್ಚ್ ಫಾರ್ ಡೆಮಾಕ್ರಸಿ

ಕಾಂಗ್ರೆಸ್ ಈ ಪ್ರತಿಭಟನೆಗೆ ‘ಚಲೋ ದೆಹಲಿ – ಮಾರ್ಚ್ ಫಾರ್ ಡೆಮಾಕ್ರಸಿ’ ಎಂದು ಹೆಸರಿಟ್ಟಿದೆ. ಸೋಮವಾರ ಮಧ್ಯಾಹ್ನ 1.30ಕ್ಕೆ ದೆಹಲಿಯ ಕನ್ನಾಟ್ ಪ್ಲೇಸ್–ಬರಾಖಂಬಾ ರಸ್ತೆ ಜಂಕ್ಷನ್‌ನಲ್ಲಿ ಪ್ರತಿಭಟನಾಕಾರರು ಸೇರಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಯುವಕರು, ನಾಗರಿಕ ಸಮಾಜದ ಸಂಘಟನೆಗಳು ಮತ್ತು ವಿವಿಧ ವಿರೋಧ ಪಕ್ಷಗಳ ಸದಸ್ಯರು ಪಕ್ಷ, ಜಾತಿ, ಧರ್ಮ ಹಾಗೂ ರಾಜ್ಯಗಳ ಭೇದ ಮರೆತು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಶನಿವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ನಡೆಸಿದ್ದಾರೆ ಮತ್ತು ಕೆಲವರನ್ನು ಬಂಧಿಸಿದ್ದಾರೆ ಎಂಬ ಆರೋಪವನ್ನೂ ಕಾಂಗ್ರೆಸ್ ಮಾಡಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪತ್ರಕರ್ತರು, ಸ್ವತಂತ್ರ ಬ್ಲಾಗರ್‌ಗಳು ಹಾಗೂ ಯೂಟ್ಯೂಬರ್‌ಗಳನ್ನು ಬಂಧಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

Must Read

Skip to toolbar