October 14, 2026
Wednesday, October 14, 2026
spot_img

ಸಕಲೇಶಪುರದ ಈ ಹಳ್ಳಿಗೆ ಹತ್ತು ದಿನದಿಂದ ಸರ್ಕಾರಿ ಬಸ್‌ ಬಂದೇ ಇಲ್ಲ! ವಿದ್ಯಾರ್ಥಿಗಳು, ಕಾರ್ಮಿಕರ ಪರದಾಟ

ಹೊಸದಿಗಂತ ವರದಿ ಸಕಲೇಶಪುರ:

ತಾಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕಳೆದ 10 ದಿನಗಳಿಂದ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಹೆತ್ತೂರು ಹೋಬಳಿಯ ಹಾಡ್ಲಹಳ್ಳಿ, ಜಾತಹಳ್ಳಿ, ಬೊಬ್ಬನಹಳ್ಳಿ, ಚೀರಿ ಮತ್ತು ಚಿನ್ನುಹಳ್ಳಿ ಗ್ರಾಮಗಳಿಗೆ ಕಾಗಿನಹರೆ ಹಾಗೂ ಗೊದ್ದು ಸೋಮವಾರಪೇಟೆ ಮಾರ್ಗದ ಸರ್ಕಾರಿ ಬಸ್‌ಗಳು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಂಚರಿಸುತ್ತಿದ್ದವು. ಆದರೆ, ಬೊಬ್ಬನಹಳ್ಳಿ ಸಮೀಪದ ತಿರುವಿನಲ್ಲಿ ಭಾರಿ ಮಳೆಯಿಂದ ರಸ್ತೆ ಬಿರುಕು ಬಿಟ್ಟು ಕುಸಿದಿದ್ದು, ರಸ್ತೆಯಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿದೆ. ರಸ್ತೆಯ ಅಂಚು ಕುಸಿದಿರುವುದರಿಂದ ಬಸ್ ಸಂಚರಿಸುವ ವೇಳೆ ಚಾರ್ಸಿಗೆ ರಸ್ತೆ ತಾಗುವ ಅಪಾಯ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮಸ್ಥರು ಇದೀಗ ಆಟೋ ಹಾಗೂ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ.

ಮಳೆ ಜೊತೆಗೆ ಕಾಡಾನೆ ಭಯ

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ರಾಜೇಗೌಡ ಮಾತನಾಡಿ, ರಸ್ತೆ ಹದಗೆಟ್ಟು ಹಲವು ದಿನಗಳಾದರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿಲ್ಲ. ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಪಡಿಸಿ ಬಸ್ ಸಂಚಾರ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು. ಹಾಸನ ಜಿಲ್ಲಾ ಡಿಎಸ್‌ಎಸ್ ಸಂಚಾಲಕ ವಳಲಹಳ್ಳಿ ವಿರೇಶ್ ಮಾತನಾಡಿ, ಸಕಲೇಶಪುರಕ್ಕೆ ತೆರಳಲು ಗ್ರಾಮಸ್ಥರು ಆಟೋ ಅಥವಾ ಕಾಲ್ನಡಿಗೆಯನ್ನು ಅವಲಂಬಿಸಬೇಕಾಗಿದೆ. ಈಗಾಗಲೇ ಭಾರಿ ಮಳೆ ಹಾಗೂ ಕಾಡಾನೆಗಳ ಹಾವಳಿ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸುರಕ್ಷತೆ ಬಗ್ಗೆ ಆತಂಕವಿದೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಶೀಘ್ರ ರಸ್ತೆ ದುರಸ್ತಿಯಾಗದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆಟೋಗೆ 100 ರೂಪಾಯಿ ಕೊಡಬೇಕು

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ರೈತ ಘಟಕದ ಅಧ್ಯಕ್ಷ ವಸಂತ್ ಬೊಮ್ಮನಕೆರೆ ಹಾಗೂ ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ದರ್ಶನ್ ಮರ್ಚನಹಳ್ಳಿ ಅವರು ಕೂಡ ಅಧಿಕಾರಿಗಳು ವಿಳಂಬ ಮಾಡದೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡು ಬಸ್ ಸಂಚಾರ ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು. ಬಸ್ ಸೌಲಭ್ಯ ಇಲ್ಲದ ಕಾರಣ ವಳಲಹಳ್ಳಿ ಕೂಡಿಗೆಯಿಂದ ಸಕಲೇಶಪುರಕ್ಕೆ ತೆರಳಲು ಆಟೋದಲ್ಲಿ ಸುಮಾರು 100 ವೆಚ್ಚವಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಹೆಚ್ಚುವರಿ ಹೊರೆಯಾಗಿದೆ ಎಂದು ದರ್ಶನ್ ಮರ್ಚನಹಳ್ಳಿ ಹೇಳಿದರು.

Must Read