ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಸಂಚು ರೂಪಿಸಿದ್ದ ದೊಡ್ಡ ಜಾಲವೊಂದನ್ನು ಭಾರತೀಯ ಭದ್ರತಾ ಪಡೆಗಳು ಯಶಸ್ವಿಯಾಗಿ ಧ್ವಂಸಗೊಳಿಸಿವೆ. ಜಮ್ಮು-ಕಾಶ್ಮೀರ ಪೊಲೀಸ್, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ ಪಡೆಗಳು ಜಂಟಿಯಾಗಿ ನಡೆಸಿದ 90 ಗಂಟೆಗಳ ಬೃಹತ್ ಕಾರ್ಯಾಚರಣೆಯಲ್ಲಿ ಐವರು ‘ಹೈಬ್ರಿಡ್ ಉಗ್ರರು’ ಹಾಗೂ ಎಂಟು ಓವರ್ಗ್ರೌಂಡ್ ವರ್ಕರ್ಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 4 ಪಿಸ್ತೂಲ್ಗಳು, 2 ಗ್ರೆನೇಡ್ಗಳು, ಎಕೆ-ರೈಫಲ್, ಐಇಡಿ, 10 ಹ್ಯಾಂಡ್ ಗ್ರೆನೇಡ್ಗಳು ಹಾಗೂ 100ಕ್ಕೂ ಹೆಚ್ಚು ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುಲ್ವಾಮಾ ಕಾಡುಗಳು ಮತ್ತು ಸೋಪೋರ್ ಪ್ರದೇಶಗಳಲ್ಲಿ ಅಡಗಿಸಿಡಲಾಗಿದ್ದ ಈ ಅಪಾಯಕಾರಿ ಆಯುಧಗಳನ್ನು ವಶಕ್ಕೆ ಪಡೆಯುವ ಮೂಲಕ ಮುಗ್ಧ ಜನರ ಪ್ರಾಣಕ್ಕೆ ಎದುರಾಗಿದ್ದ ಅಪಾಯವನ್ನು ತಡೆಯಲಾಗಿದೆ.
ಯಾವುದೇ ಹಳೆಯ ಅಪರಾಧ ಹಿನ್ನೆಲೆಯಿಲ್ಲದೆ, ಸಮಾಜದಲ್ಲಿ ವಿದ್ಯಾರ್ಥಿಗಳಂತೆ ಅಥವಾ ದಿನಗೂಲಿ ನೌಕರರಂತೆ ನಟಿಸುತ್ತಾ ಸೋಷಿಯಲ್ ಮೀಡಿಯಾ ಮೂಲಕ ಪ್ರಚೋದನೆಗೆ ಒಳಗಾಗುತ್ತಿದ್ದ ಈ ಹೈಬ್ರಿಡ್ ಉಗ್ರರನ್ನು ಪತ್ತೆಹಚ್ಚುವುದು ಸವಾಲಾಗಿತ್ತು. ಆದರೆ ನಮ್ಮ ಪಡೆಗಳ ಚಾಣಾಕ್ಷತೆ ಮತ್ತು ತಂತ್ರಜ್ಞಾನದ ಬಳಕೆಯಿಂದ ಈ ರಹಸ್ಯ ಜಾಲ ಭೇದಿಸಲಾಗಿದೆ.



