August 28, 2026
Friday, August 28, 2026
spot_img

ಕಣ್ಣಿಗೆ ಖಾರದಪುಡಿ ಎರಚಿ ಸೊಸೆ ಕೊಲೆ ಮಾಡೋಕೆ ಬಂದಿದ್ಲು: ರಕ್ಷಣೆ ಕೊಡಿ ಎಂದು ಕಣ್ಣೀರಿಟ್ಟ ಅಜ್ಜಿ!

ಹೊಸದಿಗಂತ ವರದಿ ಹಾಸನ:

ನನ್ನ ಸೊಸೆ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿಯೋಕೆ ಬಂದಿದ್ಲು! ಅದು ಸಾಧ್ಯವಾಗದೇ ಇದ್ದಾಗ ಮೊದಲ ಮಹಡಿಯಿಂದ ನನ್ನನ್ನು ತಳ್ಳಿ ಕೊಲೆ ಮಾಡೋಕೆ ಬಂದಿದ್ದಳು. ದಯವಿಟ್ಟು ನನಗೆ ರಕ್ಷಣೆ ಕೊಡಿ ಎಂದು ಹಾಸನದ ವೃದ್ಧೆ ಚಂದ್ರಮ್ಮ ಎನ್ನುವವರು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಚಂದ್ರಮ್ಮ ಹಾಗೂ ಅಟ್ರಾಸಿಟಿ ಸಮಿತಿ ಸದಸ್ಯ ಲಕ್ಷ್ಮೀಪತಿ ಮಾತನಾಡಿ, ವೃದ್ಧೆಗೆ ತುರ್ತಾಗಿ ಪೊಲೀಸ್ ರಕ್ಷಣೆ ನೀಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ನನಗೆ 70 ವರ್ಷ ವಯಸ್ಸಾಗಿದೆ. ಮಗ ಬದುಕಿಲ್ಲ. ನಾನು ಸೊಸೆ ಇಬ್ಬರೇ ಮನೆಯಲ್ಲಿ ಇದ್ದೀವಿ. ಅವಳ ಜೊತೆ ಮನೆಯಲ್ಲಿ ನೆಮ್ಮದಿಯಿಂದ ಕಣ್ಣುಮುಚ್ಚಲೂ ಸಾಧ್ಯವಾಗುತ್ತಿಲ್ಲ. ಯಾವಾಗ ಯಾವ ರೀತಿ ಬಂದು ನನ್ನನ್ನು ಕೊಲೆ ಮಾಡುತ್ತಾಳೋ ಗೊತ್ತಿಲ್ಲ. ಇರುವ ಆಸ್ತಿಯೆಲ್ಲಾ ತನಗೇ ಬೇಕು ಎಂದು ನನ್ನನ್ನು ಕೊಲ್ಲಲು ಸಂಚು ಮಾಡುತ್ತಿದ್ದಾಳೆ. ನನಗೆ ರಕ್ಷಣೆ ಕೊಡಿ, ನ್ಯಾಯ ಸಿಗುವಂತೆ ಮಾಡಿ ಎಂದು ಅಜ್ಜಿ ಕಣ್ಣೀರು ಹಾಕಿದ್ದಾರೆ.

ಏನಿದು ಆಸ್ತಿ ಕಲಹ?

ಗುಂಡೇನಗೌಡಕೊಪ್ಪಲು ಗ್ರಾಮದ ನಿವಾಸಿ ಚಂದ್ರಮ್ಮ 40 ವರ್ಷಗಳಿಂದ ಸ್ವಂತ ಮನೆಯಲ್ಲಿ ವಾಸವಿದ್ದಾರೆ. ಮನೆಯ ಕೆಳಮಹಡಿಯಲ್ಲಿ ಚಂದ್ರಮ್ಮ ಹಾಗೂ ಮೇಲಿನ ಮಹಡಿಯಲ್ಲಿ ಮಗ ದಿನೇಶ್‌, ಸೊಸೆ ಶಶಿಕಲಾ ಹಾಗೂ ಮಕ್ಕಳು ವಾಸವಿದ್ದರು. ಕೆಲ ದಿನಗಳ ಹಿಂದಷ್ಟೇ ದಿನೇಶ್‌ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಮನೆ ಚಂದ್ರಮ್ಮ ಹೆಸರಿನಲ್ಲಿದೆ. ಇನ್ನು ಮಿಕ್ಕ ಆಸ್ತಿ ಎಲ್ಲವೂ ಚಂದ್ರಮ್ಮ ಹೆಸರಿನಲ್ಲಿಯೇ ಇದೆ. ಮಗ ಸತ್ತ ಕೆಲವೇ ದಿನಗಳಲ್ಲಿ ಸೊಸೆ ಆಸ್ತಿ ಮೇಲೆ ಕಣ್ಣು ಹಾಕಿದ್ದಾಳೆ. ನಾನು ಮಲಗಿದ್ದಾಗ ಬಂದು ಕಣ್ಣಿಗೆ ಖಾರದಪುಡಿ ಹಾಕಿ ಹೊಟ್ಟೆಗೆ ಚಾಕು ಹಾಕಲು ಯತ್ನಿಸಿದ್ದಳು ಎಂದಿದ್ದಾರೆ.

ಎರಡು ಬಾರಿ ಕೊಲೆ ಯತ್ನ?

ಆಗಸ್ಟ್ 14ರಂದು ರಾತ್ರಿ 9 ಗಂಟೆ ಸುಮಾರಿಗೆ ಮೊದಲ ಮಹಡಿಯಿಂದ ಕುತ್ತಿಗೆ ಹಿಸುಕಿ ಮೇಲಿನಿಂದ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದು, ತಾವು ಹೇಗೋ ತಪ್ಪಿಸಿಕೊಂಡು ಬಾಗಿಲು ಹಾಕಿ ರಕ್ಷಣೆ ಪಡೆದಿದ್ದಾಗಿ ಚಂದ್ರಮ್ಮ ಅಳಲು ತೋಡಿಕೊಂಡಿದ್ದು, ತನ್ನ ಸೊಸೆ ಹೊರಗಿನ ಕೆಲವರ ಕುಮ್ಮಕ್ಕಿನಿಂದ ಈ ರೀತಿ ಮಾಡುತ್ತಿದ್ದಾಳೆ ಎಂದು ಆರೋಪಿಸಿದರು.

ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ವೃದ್ಧೆಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಿ, ಈ ಕೃತ್ಯದ ಕುರಿತು ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಅಟ್ರಾಸಿಟಿ ಸಮಿತಿ ಸದಸ್ಯ ಲಕ್ಷ್ಮೀಪತಿ ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !