August 28, 2026
Friday, August 28, 2026
spot_img

‘ಹಗರಣ ಸಾಬೀತಾದ್ರೆ ರಾಜಕೀಯ ಬಿಡ್ತೇನೆ’: ಕುಮಾರಸ್ವಾಮಿಗೆ ಬಾಲಕೃಷ್ಣ ಸವಾಲ್!

ಹೊಸದಿಗಂತ ವರದಿ ​ರಾಮನಗರ:

ನಾನು 600 ಕೋಟಿ ಬಿಡಿ, ಒಂದು ರೂಪಾಯಿ ಹಗರಣ ಮಾಡಿದ್ದೇನೆಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.

ಹಗರಣ ಸಾಬೀತಿಗೆ ಸವಾಲ್

ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನ್ನ ತಪ್ಪನ್ನು ಕುಮಾರಸ್ವಾಮಿ ಪ್ರೂವ್ ಮಾಡಲಿ. ನಾನು ತಪ್ಪು ಮಾಡಿದ್ದರೆ ಅವರ ಕಾಲು ಹಿಡಿಯುತ್ತೇನೆ. ಆದರೆ ತಪ್ಪೇ ಮಾಡದೆ ಏಕೆ ಕಾಲು ಹಿಡಿಯಬೇಕು? ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಆರೋಪ ಸಾಬೀತುಪಡಿಸದಿದ್ದರೆ ಅವರೇ ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದರು.

ಕುಮಾರಸ್ವಾಮಿ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು. ಆಧಾರರಹಿತ ಆರೋಪ ಹಾಗೂ ಉಡಾಫೆ ಮಾತುಗಳನ್ನು ಜನರು ಕೇಳುವುದಿಲ್ಲ ಎಂದು ತಿಳಿಸಿದರು.

ವಿಧಾನಸಭೆ ಕಲಾಪದ ಬಗ್ಗೆ ಅಸಮಾಧಾನ

ಸಚಿವ ನಾಗೇಂದ್ರ ಅವರ ರಾಜೀನಾಮೆ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದ ಬಾಲಕೃಷ್ಣ, ಬರ ಪರಿಸ್ಥಿತಿಯಂತಹ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯ ಅದಿವೇಶನದಲ್ಲಿ ಚರ್ಚೆ ನಡೆಸಬೇಕಿತ್ತು. ಆದರೆ ವಿರೋಧ ಪಕ್ಷಗಳು ಅನಗತ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಯ ಹಾಳು ಮಾಡಿದವು ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಕೇಂದ್ರದಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಆದರೆ ರಾಜ್ಯದ ಹಿತದೃಷ್ಟಿಯಿಂದ ಅಗತ್ಯವಿರುವ ವಿಚಾರಗಳ ಬಗ್ಗೆ ವಿರೋಧ ಪಕ್ಷಗಳು ಚರ್ಚೆ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದರು.

ನೈಸ್‌ ಯೋಜನೆ ಕುರಿತು ತಿರುಗೇಟು

ನೈಸ್ ರಸ್ತೆ ವಿಚಾರವಾಗಿ ಜೆಡಿಎಸ್ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ನೈಸ್ ರಸ್ತೆಗೂ ಸರ್ಕಾರಕ್ಕೂ ನೇರ ಸಂಬಂಧವಿಲ್ಲ ಎಂದರು.

ನೈಸ್ ವಿಚಾರದಲ್ಲಿ ಸರ್ಕಾರ ಸಬ್ ಕಮಿಟಿ ರಚಿಸಿದ್ದು, ಸಭೆ ಕರೆದ ಬಳಿಕ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು. ನ್ಯಾಯಾಲಯದಲ್ಲಿ ಏನು ತೀರ್ಮಾನವಾಗಿದೆ ಎಂಬುದರ ಆದೇಶವನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದರು.

ನೈಸ್ ಯೋಜನೆಯನ್ನು ರಾಜ್ಯಕ್ಕೆ ತಂದವರು ಸನ್ಮಾನ್ಯ ದೇವೇಗೌಡರು. ಅವರು ಅಂಕಿತ ಹಾಕಿದ ಕೂಸು ಇಂದು ಬೃಹದಾಕಾರವಾಗಿ ಬೆಳೆದಿದೆ. ಹೀಗಾಗಿ ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು ಎಂದರು.

ಡಿ.ಕೆ. ಶಿವಕುಮಾರ್ ಅವರು ನೈಸ್ ರಸ್ತೆಯನ್ನು ವಶಕ್ಕೆ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಆಧಾರವೇನು ಎಂದು ಪ್ರಶ್ನಿಸಿದ ಅವರು, ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಾಕಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸುವುದೇ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದರು.

ಮಹಾರಾಜರ ಕಾಲದಲ್ಲಿ ಹೊಗಳು ಭಟ್ಟರನ್ನು ಇಟ್ಟುಕೊಳ್ಳುತ್ತಿದ್ದರು. ಹಾಗೆಯೇ ನಮ್ಮ ಸರ್ಕಾರವನ್ನು ಬೈಯಲು ನಾವು ಕುಮಾರಣ್ಣನನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಪದೇಪದೇ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸಚಿವರಾಗಿ ಆಧಾರ ಇಟ್ಟುಕೊಂಡು ಮಾತನಾಡಬೇಕು ಎಂದು ಬಾಲಕೃಷ್ಣ ತಿರುಗೇಟು ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !