ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನ್ನವು ಆನಂದದ ಪ್ರತೀಕವಾಗಿದ್ದು, ಆಹಾರದ ಮೂಲಭೂತ ಗುಣವೇ ಆನಂದವಾಗಿದೆ. ದೇವರೇ ಆಹಾರದ ರೂಪದಲ್ಲಿ ಬಂದು ಜೀವಿಗಳಿಗೆ ಆನಂದ ಹಂಚುತ್ತಿದ್ದು, ಅನ್ನ ಪರಬ್ರಹ್ಮನ ಸ್ವರೂಪವೇ ಆಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಶುಕ್ರವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು.
ಆಹಾರದಿಂದ ಸರ್ವೇಂದ್ರಿಯಗಳಿಗೂ ಆನಂದ
ತಿನ್ನುವ ಎಲ್ಲಾ ಪದಾರ್ಥಗಳೂ ರೂಪ, ಗುಣ, ರುಚಿಯಲ್ಲಿ ವ್ಯತ್ಯಾಸವಿದ್ದರೂ, ಸಿಹಿ, ಹುಳಿ, ಖಾರ ಸೇರಿದಂತೆ ಷಡ್ರಸಗಳಿಂದ ಕೂಡಿದ ಆಹಾರವು ಸರ್ವೇಂದ್ರಿಯಗಳಿಗೂ ಆನಂದ ನೀಡುತ್ತದೆ. ಅನ್ನದಂತೆ ಸರ್ವೇಂದ್ರಿಯಗಳಿಗೆ ಸಂತೋಷ ನೀಡುವ ವಸ್ತು ಮತ್ತೊಂದಿಲ್ಲ. ಇದೇ ಕಾರಣಕ್ಕೆ ಅನ್ನವನ್ನು ದೇವರೆಂದು ಗೌರವಿಸುವ ಪರಂಪರೆ ಬೆಳೆದಿದೆ ಎಂದರು.

ಆಹಾರವು ಜೀವಿಯ ಆಯುಷ್ಯ, ಶಕ್ತಿ, ವರ್ಣ, ಸ್ಮೃತಿ, ಸತ್ವ, ಓಜಸ್ಸು ಹಾಗೂ ಶೋಭೆಗೆ ಕಾರಣವಾಗುತ್ತದೆ. ಹಸಿವು ಹೆಚ್ಚಾದಾಗ ಬುದ್ಧಿಯ ಕಾರ್ಯಕ್ಷಮತೆ ಕುಂಠಿತವಾಗಲಿದ್ದು, ಸರಿಯಾದ ಆಹಾರ ಸೇವನೆಯಿಂದ ಬುದ್ಧಿ ಮತ್ತೆ ಚುರುಕಾಗುತ್ತದೆ ಎಂದು ತಿಳಿಸಿದರು.
ಓಜಸ್ಸು ಜೀವಶಕ್ತಿಯ ಮೂಲ
ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಓಜಸ್ಸಿನ ಮಹತ್ವವನ್ನು ವಿವರಿಸಲಾಗಿದೆ. ದೇಹದಲ್ಲಿರುವ ರಸ, ರಕ್ತ ಸೇರಿದಂತೆ ಸಪ್ತಧಾತುಗಳ ಸಾರದಿಂದ ಓಜಸ್ಸು ರೂಪುಗೊಳ್ಳುತ್ತದೆ. ಆಹಾರವು ದೇಹದ ಅಗ್ನಿಯನ್ನು ಕಾಪಾಡುವುದರ ಜೊತೆಗೆ ಓಜಸ್ಸನ್ನು ವೃದ್ಧಿಸುತ್ತದೆ. ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ಓಜಸ್ಸನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಏನಿದು ಓಜಸ್ಸು?
ಚರಕ ಮಹರ್ಷಿಗಳ ಪ್ರಕಾರ, ತಾಯಿಯ ಗರ್ಭದಲ್ಲಿ ಜೀವಿಯ ಬೆಳವಣಿಗೆ ಆರಂಭವಾಗುವಾಗ ಮೊಟ್ಟ ಮೊದಲು ಓಜಸ್ಸಿನಿಂದ ಆ ಬೆಳವಣಿಗೆ ಆರಂಭವಾಗುತ್ತದೆ. ಹೃದಯ ಭಾಗದಲ್ಲಿರುವ ಓಜಸ್ಸು ಜೀವಶಕ್ತಿಯ ಮೂಲವಾಗಿದ್ದು, ಅದರ ನಾಶದಿಂದ ದೇಹವೂ ನಾಶವಾಗುತ್ತದೆ. ಓಜಸ್ಸು ದೇಹದಲ್ಲಿರುವ ಅಮೃತದ್ರವವಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿವರಿಸಿದರು.
ಡಾ. ರಾಜಾರಾಮ ಮಡಿಕೇರಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಅರವಿಂದ ಬಂಗಲಗಲ್ಲು, ಗುರು ಲಕ್ಮನೆ, ಚಂದನ್ ಶಾಸ್ತ್ರಿ ಮಗೇಗಾರು, ಸೌಮ್ಯಾ ಮಧ್ಯಸ್ಥ, ಅಜಿತ ಗುಡ್ಗೆ, ಶ್ರೀಕೃಷ್ಣ ಶಾಸ್ತ್ರಿ, ದಿನೇಶ ಹೆಗಡೆ ಹೊಸಾಕುಳಿ, ಕಿರಣ ಸುಂಗೊಳ್ಳಿಮನೆ, ದಿನಪ್ರಧಾನರಾಗಿ ಗುಣಾಜೆ ರಾಮಕೃಷ್ಣ ಭಟ್ ದಂಪತಿಗಳು ಉಪಸ್ಥಿತರಿದ್ದರು.

ಮರಾಠ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಶ್ರೀರಾಮಚಂದ್ರಾಪುರ ಮಠದ ಶಿಷ್ಯಭಾವದಲ್ಲಿ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ಮರಾಠ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನೆರವೇರಿಸಲಾಯಿತು. ಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗುರುಪೀಠ ಮತ್ತು ಶಿಷ್ಯರು ಆಗಾಗ್ಗೆ ಸೇರುವುದರಿಂದ ಗುರು-ಶಿಷ್ಯ ಭಾವ ಮತ್ತಷ್ಟು ವೃದ್ಧಿಯಾಗುತ್ತದೆ. ಮರಾಠ ಸಮಾಜದ ಕಷ್ಟ-ನಷ್ಟಗಳು ದೂರವಾಗಿ ಪರಂಪರೆಯ ಅನುಗ್ರಹ ಸದಾ ಇರಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮರಾಠ ಸಮಾಜದ ಜಿಲ್ಲಾ ಅಧ್ಯಕ್ಷ ಮಂಜುನಾಥ ತಿಮ್ಮ ಮರಾಠಿ, ಕುಮಟಾ ತಾಲೂಕು ಅಧ್ಯಕ್ಷ ಪುರುಷೋತ್ತಮ ಶೇಡಿಗದ್ದೆ ಸೇರಿದಂತೆ ಸಮಾಜದ ಹಲವು ಪ್ರಮುಖರು ಹಾಗೂ ನೂರಾರು ಮಂದಿ ಉಪಸ್ಥಿತರಿದ್ದರು.



