August 29, 2026
Saturday, August 29, 2026
spot_img

ಮಧ್ಯ ಏಷ್ಯಾದತ್ತ ಮೋದಿ ಪ್ರವಾಸ: SCO ಶೃಂಗಸಭೆಯಲ್ಲಿ ಭಾಗಿ, ಪುಟಿನ್ ಜತೆ ಮಹತ್ವದ ಮಾತುಕತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಮಧ್ಯ ಏಷ್ಯಾದ ಪ್ರವಾಸ ಪ್ರಾರಂಭಿಸಿದ್ದು, ನಾಲ್ಕು ದಿನಗಳ ಈ ಪ್ರವಾಸದಲ್ಲಿ ಉಜ್ಬೇಕಿಸ್ತಾನ, ಕಿರ್ಗಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಜತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಪುಟಿನ್ ಜತೆ ಮೀಟಿಂಗ್

SCO ಶೃಂಗಸಭೆ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶದ ನಾಯಕರು ವ್ಯಾಪಾರ, ರಕ್ಷಣೆ, ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳ ಸಹಕಾರದ ಕುರಿತು ಮಾತುಕತೆ ನಡೆಯುವ ಸಾಧ್ಯತೆಯಿದೆ.

SCO ಸ್ಥಾಪನೆಯಾಗಿ 25 ವರ್ಷ

SCO ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೇ. ಅಷ್ಟೇ ಅಲ್ಲದೆ ಈ ಶೃಂಗಸಭೆಯಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದದಂತಹ ಸವಾಲುಗಳ ವಿರುದ್ಧ ಸಹಕಾರ ಹೆಚ್ಚಿಸುವ ಅಗತ್ಯದ ಬಗ್ಗೆ ಭಾರತ ತನ್ನ ನಿಲುವನ್ನು ಮಂಡಿಸಲಿದೆ.

ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಉಜ್ಬೇಕಿಸ್ತಾನದೊಂದಿಗೆ ಸಂಬಂಧ ಬಲಪಡಿಸುವ ಗುರಿ

ಆಗಸ್ಟ್ 29ರಿಂದ 30ರವರೆಗೆ ಉಜ್ಬೇಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ವ್ಯಾಪಾರ, ರಕ್ಷಣಾ ಕ್ಷೇತ್ರ, ಡಿಜಿಟಲ್ ಸಂಪರ್ಕ, ಇನ್ವೆಸ್ಟ್ಮೆಂಟ್, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಒಡಂಬಡಿಕೆಯ ಕುರಿತು ಚರ್ಚೆ ನಡೆಯಲಿದೆ.

ಉಜ್ಬೇಕಿಸ್ತಾನಕ್ಕೆ ಮೋದಿ ಅವರು ನಾಲ್ಕನೇ ಬಾರಿ ಭೇಟಿ ನೀಡುತ್ತಿದ್ದು, ತಾಷ್ಕೆಂಟ್‌ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕ ಹಾಗೂ ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್‌ನಲ್ಲಿರುವ ಮಹಾತ್ಮ ಗಾಂಧಿ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ.

ವಿಶ್ವ ನೋಮಾಡ್ ಗೇಮ್ಸ್‌ನಲ್ಲೂ ಭಾಗಿ

ಕಿರ್ಗಿಸ್ತಾನ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಆರನೇ ವಿಶ್ವ ನೋಮಾಡ್ ಗೇಮ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಈ ಕೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಭಾರತ-ಕಿರ್ಗಿಸ್ತಾನ ನಡುವಿನ ಬಾಂಧವ್ಯಕ್ಕೂ ಒತ್ತು ನೀಡಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !