ಹೊಸದಿಗಂತ ವರದಿ ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಎಂ. ಕಾರಜೋಳ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಹಾಗೂ ಇದರಿಂದ ರೈತರು, ಕೃಷಿ, ಕುಡಿಯುವ ನೀರು, ರಸ್ತೆ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಕುರಿತು ಇಂದು ಸಂಸತ್ತಿನ ಕಲ್ಲಿದ್ದಲು, ಗಣಿ ಮತ್ತು ಉಕ್ಕು ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿ ಸಭೆಯಲ್ಲಿ ಗಂಭೀರವಾಗಿ ಪ್ರಸ್ತಾಪಿಸಿದರು.
ಸಮಿತಿಯ ಮುಂದೆ ಮಂಡಿಸಲಾದ ಮಾಹಿತಿಯ ಪ್ರಕಾರ, 2023 ರಿಂದ 2025ರ ಅವಧಿಯಲ್ಲಿ ಕರ್ನಾಟಕದಲ್ಲಿಒಟ್ಟು 23,575 ಅಕ್ರಮಗಣಿಗಾರಿಕೆ ಪ್ರಕರಣಗಳು ದಾಖಲಾಗಿವೆ ಎಂದು ಕಾರಜೋಳ ಅವರು ಗಮನ ಸೆಳೆದರು.

ಈ 23,575 ಪ್ರಕರಣಗಳ ಜಿಲ್ಲಾವಾರು ವಿವರಗಳನ್ನು ಸಮಿತಿಗೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಇದರಲ್ಲಿ ದಾಖಲಾಗಿರುವ ಎಫ್.ಐ.ಆರ್.ಗಳ ಸಂಖ್ಯೆ, ಕೈಗೊಂಡ ಕ್ರಮ, ವಿಧಿಸಲಾದ ದಂಡ, ವಸೂಲಾದ ಮೊತ್ತ, ಬಾಕಿ ಇರುವ ಪ್ರಕರಣಗಳು ಹಾಗೂ ಪ್ರಸ್ತುತ ಪ್ರಕರಣಗಳ ಸ್ಥಿತಿಯ ಸಂಪೂರ್ಣ ವಿವರಗಳನ್ನು ನೀಡುವಂತೆ ಅವರು ಆಗ್ರಹಿಸಿದರು.
ಚಿತ್ರದುರ್ಗದಲ್ಲಿ ಗಂಭೀರ ಪರಿಸ್ಥಿತಿ :
ಚಿತ್ರದುರ್ಗಜಿಲ್ಲೆಯ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲ್ಲೂಕುಗಳಲ್ಲಿ ಗಣಿಗಾರಿಕೆ ಚಟುವಟಿಕಗಳಿಂದ ಸ್ಥಳಿಯ ರೈತರು ಮತ್ತು ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾರಜೋಳ ಅವರು ಸಮಿತಿಯ ಮುಂದೆ ಪ್ರಸ್ತಾಪಿಸಿದರು.
ಭಾರಿ ಮತ್ತು ಓವರ್ ಲೋಡ್ ಖನಿಜ ಸಾಗಾಣಿಕೆ ವಾಹನಗಳ ನಿರಂತರ ಸಂಚಾರದಿಂದ ಗ್ರಾಮೀಣ ರಸ್ತೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಇದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಶಾಲಾ ಮಕ್ಕಳಿಗೆ ಸುರಕ್ಷತಾ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಅವರು ತಿಳಿಸಿದರು.
ಅದೇ ರೀತಿ ಗಣಿಗಾರಿಕೆಯಿಂದ ಉಂಟಾಗುತ್ತಿರುವ ಧೂಳಿನ ಮಾಲಿನ್ಯದಿಂದ ಕೃಷಿ ಬೆಳೆಗಳಿಗೆ ಹಾನಿ, ಭೂಮಿಯ ಗುಣಮಟ್ಟ ಕುಸಿತ, ಗಣಿಗಾರಿಕೆ ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ಅಂತರ್ಜಲ ಹಾಗೂ ಕುಡಿಯುವ ನೀರಿನ ಮೂಲಗಳ ಮಾಲಿನ್ಯ ಮತ್ತು ಬ್ಲಾಸ್ಟಿಂಗ್‌ನಿಂದ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದರು.
ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸುವುದು, ಖನಿಜಗಳ ಅಕ್ರಮ ಸಾಗಾಣಿಕೆ, ಅರಣ್ಯ ಭೂಮಿಯ ಅತಿಕ್ರಮಣ, ಕೃಷಿ ಭೂಮಿಯನ್ನು ಅನಧಿಕೃತವಾಗಿ ಸಾಗಾಣಿಕೆ ಮಾರ್ಗವಾಗಿ ಬಳಸುವುದು ಹಾಗೂ ಪರಿಸರ ಸುರಕ್ಷತಾ ನಿಯಮಗಳ ಸಮರ್ಪಕ ಅನುಷ್ಠಾನವಾಗದಿರುವ ಕುರಿತು ಬಂದಿರುವ ಆರೋಪಗಳನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸಮಗ್ರ ತನಿಖೆಗೆ ಆಗ್ರಹ :
ಈ ವಿಷಯದ ಕುರಿತು ಕೇಂದ್ರ ಗಣಿ ಸಚಿವಾಲಯ, ಕರ್ನಾಟಕ ಸರ್ಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಇತರ ಸಂಬಂಧಿತ ಅಧಿಕಾರಿಗಳಿಂದ ಸಮಗ್ರ ವರದಿ ಪಡೆಯುವಂತೆ ಕಾರಜೋಳ ಅವರು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದರು.
ಅಲ್ಲದೇ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲ್ಲೂಕುಗಳಲ್ಲಿನ ಪರಿಣಾಮಿತ ಪ್ರದೇಶಗಳಿಗೆ ಸಂಸದೀಯ ಸ್ಥಾಯಿ ಸಮಿತಿಯ ತಂಡವನ್ನು ಸ್ಥಳ ಪರಿಶೀಲನೆಗೆ ಕಳುಹಿಸುವಂತೆ ಅವರು ಮನವಿ ಮಾಡಿದರು.
ರೈತರು ಹಾಗೂ ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ಸಲ್ಲಿಸಿರುವ ದೂರುಗಳು ಮತ್ತು ನಡೆಸಿರುವ ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮಗಳು ದೃಢಪಟ್ಟಲ್ಲಿ ತಪ್ಪತಸ್ಥರ ವಿರುದ್ಧ ಕಾನೂನು ಬದ್ದವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕಾನೂನು ಮತ್ತು ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಯೇ ಗಣಿಗಾರಿಕೆ ನಡೆಸಬೇಕು, ರೈತರು ಕೃಷಿ ಭೂಮಿ, ಕುಡಿಯುವ ನೀರು, ಗ್ರಾಮಿಣ ರಸ್ತೆಗಳು ಹಾಗೂ ಪರಿಸರದ ಹಿತಾಸಕ್ತಿಯನ್ನು ಬಲಿಕೊಟ್ಟು ಗಣಿಗಾರಿಕೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ನಿಯಮ ಉಲ್ಲಂಘನೆಗಳು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಗಣಿಗಾರಿಕೆ ನಿಯಮಗಳ ಜಾರಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಸೂಕ್ತ ಕ್ರಮಗಳ ಮೂಲಕ ಪುನಃ ಸ್ಥಾಪಿಸಬೇಕು ಹಾಗೂ ಪರಿಣಾಮಿತ ಜನರ ಹಕ್ಕುಗಳು ಮತ್ತು ಜೀವನೋಪಾಯವನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.
ಚಿತ್ರದುರ್ಗ ಜಿಲ್ಲೆಯ ಜನರ ಸಮಸ್ಯೆಗಳನ್ನು ಸಂಸತ್ತಿನ ಮಟ್ಟದಲ್ಲಿ ನಿರಂತರವಾಗಿ ಪ್ರಸ್ತಾಪಿಸಿ, ಸಂಬಂಧಿತ ಅಧಿಕಾರಿಗಳಿಂದ ಪರಿಣಾಮಕಾರಿ ಮತ್ತು ಕಾಲಮಿತಿಯೊಳಗಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಕಾರಜೋಳ ಅವರು ಪುನರುಚ್ಚರಿಸಿದರು.



