August 29, 2026
Saturday, August 29, 2026
spot_img

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ: ನ್ಯಾಯಕ್ಕಾಗಿ ಯುವತಿ ಆಗ್ರಹ

ಹೊಸದಿಗಂತ ವರದಿ ಹಾಸನ:

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಹಾಸನ ಜಿಲ್ಲೆಯ ಸಾಲಗಾಮೆ ಗ್ರಾಮದ ಪ್ರದೀಪ್ ಎಂಬ ಯುವಕನ ವಿರುದ್ಧ ಯುವತಿಯೊಬ್ಬರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವತಿ, ಪ್ರದೀಪ್ ಎಂಬುವವರೊಂದಿಗೆ ಪರಿಚಯವಾಗಿ, ಬಳಿಕ ಅದು ಸ್ನೇಹವಾಗಿ, ನಂತರ ಪ್ರೇಮಕ್ಕೆ ತಿರುಗಿತ್ತು. ಇದೇ ವೇಳೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ. ತಾನು ಗರ್ಭಿಣಿಯಾದಾಗ ಮದುವೆಯಾಗಬೇಕಾದರೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರಿಂದ, ಆತನ ಮಾತಿನಂತೆ ಗರ್ಭಪಾತ ಮಾಡಿಸಿಕೊಂಡಿದ್ದೇನೆ. ನಂತರ ಮದುವೆಯಾಗುವಂತೆ ಒತ್ತಾಯಿಸಿದಾಗ, ತಾನು ಕೆಲವು ಸಮಸ್ಯೆಯಲ್ಲಿದ್ದು, ಬಳಿಕ ಮದುವೆಯಾಗುವುದಾಗಿ ಪ್ರದೀಪ್ ಹೇಳಿದ್ದ. ಆದರೆ ಈ ನಡುವೆ ತನ್ನನ್ನು ದೂರವಿಟ್ಟು ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದಾನೆ. ಈ ವಿಚಾರ ತಿಳಿದು ಪ್ರಶ್ನಿಸಿದಾಗ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಯುವತಿ ದೂರಿದರು.

ಇದನ್ನೂ ಓದಿ:

ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ಎದುರು ಪ್ರದೀಪ್ ಮದುವೆಯಾಗಲು ಸ್ವಲ್ಪ ಸಮಯಾವಕಾಶ ಕೇಳಿದ್ದ. ಬಳಿಕ ಆತ ಊರು ಬಿಟ್ಟು ಹೋಗಿದ್ದಾನೆ. ದೂರು ನೀಡಿ ಸುಮಾರು ನಾಲ್ಕು ತಿಂಗಳು ಕಳೆದಿದ್ದರೂ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ವಿಳಂಬವಾಗುತ್ತಿದೆ. ಪೊಲೀಸರು ಮಹಜರು ನಡೆಸಿದ್ದರೂ ಇದುವರೆಗೆ ನ್ಯಾಯ ದೊರೆತಿಲ್ಲ ಎಂದು ಯುವತಿ ಅಸಮಾಧಾನ ವ್ಯಕ್ತಪಡಿಸಿದರು.

ಇದಲ್ಲದೆ, ಪ್ರದೀಪ್ ತನ್ನ ಹಾಗೂ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ಈ ಸಂಬಂಧವೂ ಪೊಲೀಸರಿಗೆ ದೂರು ನೀಡಿದ್ದೇನೆ. ತಮಗೆ ನ್ಯಾಯ ದೊರಕಬೇಕು ಹಾಗೂ ಪ್ರದೀಪ್ ತಮ್ಮನ್ನು ವಿವಾಹವಾಗಬೇಕು. ಮುಂದಿನ ದಿನಗಳಲ್ಲಿ ತಮಗೆ ಅಥವಾ ತಮ್ಮ ಕುಟುಂಬದವರಿಗೆ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಪ್ರದೀಪ್ ಹಾಗೂ ಆತನ ಕುಟುಂಬದವರೇ ಹೊಣೆ ಎಂದು ಯುವತಿ ಎಚ್ಚರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !