ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಮತ್ತು ಭೂಕುಸಿತದ ನಡುವೆ ಸಿಲುಕಿದ್ದ ಕರ್ನಾಟಕದ 54 ಮಂದಿ ಪ್ರವಾಸಿಗರು ಸುರಕ್ಷತಿವಾಗಿ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಆ.23ರಂದು ರಾಜ್ಯದ ಹಾವೇರಿ, ಶಿವಮೊಗ್ಗ, ಸೇರಿದಂತೆ ವಿವಿಧ ಭಾಗಗಳಿಂದ ನೇಪಾಳ ಪ್ರವಾಸ ಕೈಗೊಂಡಿದ್ದರು. ಇದೀಗ ಉತ್ತರ ಪ್ರದೇಶ ಗೋರಖ್ಪುರ ಮಾರ್ಗವಾಗಿ ಇವರೆಲ್ಲರು ಇಂದು ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ.
ಮೃತ್ಯುಕೂಪದಿಂದ ಪಾರಾಗಿ ಬಂದ ಕನ್ನಡಿಗರು
ನೇಪಾಳದ ಮಹಾಪ್ರವಾಹದ ಮೃತ್ಯುಕೂಪದಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 54 ಮಂದಿ ಕನ್ನಡಿಗರು ತಮಗಾದ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಪ್ರವಾಸದ ವೇಳೆ ಕೇವಲ 20 ನಿಮಿಷ ತಡವಾಗಿದ್ದರಿಂದ ತಾವು ದೊಡ್ಡ ವಿಪತ್ತಿನಿಂದ ಪಾರಾಗಿ ತಮ್ಮ ನಾಡಿಗೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಧುಮ್ಮಿಕ್ಕುತ್ತಿದ್ದ ನೀರು ಮತ್ತು ರಸ್ತೆಗಳ ಭೀಕರತೆಯನ್ನು ಕಂಡು ಜೀವದಾಸೆ ಕಳೆದುಕೊಂಡಿದ್ದ ತಮಗೆ, ಹಿರಿಯರ ಆಶೀರ್ವಾದವೇ ಶ್ರೀರಕ್ಷೆಯಾಗಿ ಮರುಜನ್ಮ ನೀಡಿದೆ ಎಂದು ಕೆಲವರು ಭಾವುಕರಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಮತ್ತೊಂದು ಮಹಾ ಪ್ರಳಯದ ಎಚ್ಚರಿಕೆ
ಪ್ರಕೃತಿಯ ಮುನಿಸಿಗೆ ಸಿಲುಕಿ ನೇಪಾಳದಲ್ಲಿ ಸದ್ಯಕ್ಕೆ ಜಲಕಂಟಕ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಹುಡುಕಿದ ಕಡೆಯಲ್ಲೆಲ್ಲಾ ಹೆಣಗಳ ರಾಶಿ ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆ ಈಗಾಗಲೇ 600ರ ಗಡಿ ದಾಟಿದೆ. ಇದರ ನಡುವೆ ಚೀನಾ ವಿಪತ್ತು ಪ್ರಾಧಿಕಾರ ನೀಡಿರುವ ಹಠಾತ್ ಎಚ್ಚರಿಕೆ ನೇಪಾಳದ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಚೀನಾದ ಗಡಿಯಲ್ಲಿರುವ ಸರೋವರದ ನೈಸರ್ಗಿಕ ತಡೆಗೋಡೆ ಮುರಿದರೆ, ಪ್ರತಿ ಸೆಕೆಂಡಿಗೆ ಬರೋಬ್ಬರಿ 500 ಘನ ಮೀಟರ್ಗಿಂತಲೂ ಹೆಚ್ಚಿನ ವೇಗದಲ್ಲಿ ನೀರು ನುಗ್ಗಲಿದ್ದು, ನೇಪಾಳ ಮತ್ತೊಂದು ಮಹಾ ಪ್ರಳಯಕ್ಕೆ ಸಾಕ್ಷಿಯಾಗಲಿದೆ ಎಂದು ಎಚ್ಚರಿಸಲಾಗಿದೆ.



