August 29, 2026
Saturday, August 29, 2026
spot_img

ಲೂಟಿಯಾದ ಸಂಪೂರ್ಣ ಹಣ ರಿಟರ್ನ್‌ ಆಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ:  ಮಾಜಿ ಸಚಿವ ಶಿವನಗೌಡ ನಾಯಕ್

ಹೊಸದಿಗಂತ ವರದಿ ದಾವಣಗೆರೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ರಾಜೀನಾಮೆಯಿಂದ ನಮ್ಮ ಹೋರಾಟ ಕೊನೆಯಾಗುವುದಿಲ್ಲ. ನಿಗಮದಿಂದ ಲೂಟಿಯಾಗಿರುವ ಸಂಪೂರ್ಣ 187 ಕೋಟಿ ಹಣ ಮರಳಿ ನಿಗಮದ ಖಾತೆಗೆ ಜಮಾ ಆಗುವವರೆಗೂ ಜನಾಂದೋಲನ ಮುಂದುವರೆಯಲಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಶಿವನಗೌಡ ನಾಯಕ್ ಸ್ಷಪ್ಟಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಪ್ರಮುಖ ರೂವಾರಿ ಬಿ.ನಾಗೇಂದ್ರರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದನ್ನು ವಿರೋಧಿಸಿ ಬಿಜೆಪಿಯಿಂದ ಅಧಿವೇಶನದ ಒಳಗೂ, ಹೊರಗೂ ಸತತ ಹೋರಾಟ ನಡೆಸುತ್ತಲೇ ಬರಲಾಗಿತ್ತು. ಈ ನಿರಂತರ ಹೋರಾಟಕ್ಕೆ ಮಣಿದು ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಭ್ರಷ್ಟ ಹಾಗೂ ದಲಿತವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಹಂತದ ಜಯವಾಗಿದೆ. ಆದರೆ ಹೋರಾಟ ಇನ್ನೂ ಮುಗಿದಿಲ್ಲ ಎಂದರು.

ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಹೋರಾಟ ನಿಲ್ಲಲಿದೆ ಅಂತಾ ಕೆಲವರು ಹೇಳಿದ್ದಾರೆ. ಆದರೆ ಬಿಜೆಪಿ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ. ಹಗರಣದಲ್ಲಿ ಇನ್ನೂ ನಾಲ್ಕೈದು ಪ್ರಮುಖರು ಶಾಮೀಲಾಗಿದ್ದು, ಅಂತಹವರ ಮೇಲೂ ಕಾನೂನು ಕ್ರಮ ಜರುಗಿಸಬೇಕು. ನಿಗಮದಿಂದ ಲೂಟಿಯಾಗಿರುವ 187 ಕೋಟಿ ರೂ. ಹಣ ಮರಳಿ ನಿಗಮಕ್ಕೆ ಜಮಾ ಆಗಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಅವರು ನುಡಿದರು.

ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಹೆಚ್.ಪಿ.ರಾಜೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ್, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಹೆಚ್.ಪಿ.ವಿಶ್ವಾಸ್, ಲೋಹಿತ್ ಕುಮಾರ್, ಆರ್.ಲಕ್ಷ್ಮಣ್, ಫಣಿಯಾಪುರ ಲಿಂಗರಾಜ್, ಶ್ರೀನಿವಾಸ್ ರಟ್ಟಿಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !