ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಬಿಷ್ಕೆಕ್‌ನಲ್ಲಿ ನಡೆಯಲಿರುವ 26ನೇ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸುವ ಮುನ್ನ ತಮ್ಮ ನಾಲ್ಕು ದಿನಗಳ ಮಧ್ಯ ಏಷ್ಯಾದ ಪ್ರವಾಸದ ಭಾಗವಾಗಿ ಉಜ್ಬೇಕಿಸ್ತಾನ್ ರಾಜಧಾನಿ ತಾಷ್ಕೆಂಟ್‌ಗೆ ಭೇಟಿ ನೀಡಿದ್ದಾರೆ. ಈ ಪ್ರವಾಸವು ಭಾರತದ ಇಂಧನ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ದಾರಿಯನ್ನು ಮಾಡಿಕೊಟ್ಟಿದೆ.
ಉಜ್ಬೇಕಿಸ್ತಾನ್ ಅಧ್ಯಕ್ಷ ಶಾಹ್ಕತ್ ಮಿರ್ಜಿಯೊಯೆವ್ ಅವರೊಂದಿಗೆ ಭಾನುವಾರ ನಡೆಸಿದ ಮಾತುಕತೆಯ ನಂತರ, ಭಾರತಕ್ಕೆ ದೀರ್ಘಾವಧಿಯವರೆಗೆ ಯುರೇನಿಯಂ ಪೂರೈಕೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ
ಅಷ್ಟೇ ಅಲ್ಲದೆ, ಭಾರತೀಯರು ಇನ್ಮುಂದೆ ಉಜ್ಬೇಕಿಸ್ತಾನ್‌ಗೆ ಭೇಟಿ ನೀಡಲು 30 ದಿನಗಳವರೆಗೆ ಯಾವುದೇ ವೀಸಾ ಪಡೆಯುವ ಅಗತ್ಯವಿಲ್ಲ ಎಂದು ತಿಳಿಸಿದೆ. ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸಲು ಉಜ್ಬೇಕಿಸ್ತಾನ್ ಈ ನಿರ್ಧಾರ ಕೈಗೊಂಡಿದೆ.
ಬೆಳೆಯುತ್ತಿರುವ ವ್ಯಾಪಾರ ವಹಿವಾಟು
ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ಜಂಟಿ ಉದ್ಯಮಗಳು 7 ಪಟ್ಟು ಹೆಚ್ಚಾಗಿವೆ. ಒಟ್ಟು ವ್ಯಾಪಾರವು ಮೊದಲ ಬಾರಿಗೆ ಸುಮಾರು 8,400 ಕೋಟಿ ರೂ ದಾಟಿದೆ. ಈಗ ವಾರಕ್ಕೆ14 ನೇರ ವಿಮಾನಗಳಿರುವುದರಿಂದ ಉಭಯ ದೇಶಗಳ ನಡುವಿನ ಪ್ರಯಾಣ ಇನ್ನು ಸುಲಭವಾಗಲಿದೆ.
ನಗರ ಯೋಜನೆಗೆ ಭಾರತದ ಸಹಾಯ
ಉಜ್ಬೇಕಿಸ್ತಾನ್ ತನ್ನ ರಾಜಧಾನಿಯ ಪಕ್ಕದಲ್ಲೇ ‘ನ್ಯೂ ತಾಷ್ಕೆಂಟ್’ ಎಂಬ ಸಂಪೂರ್ಣ ಆಧುನಿಕ ನಗರವನ್ನು ಕಟ್ಟುತ್ತಿದೆ. ಇದಕ್ಕೆ ನಮ್ಮ ಗುಜರಾತ್‌ನ ‘ಗಿಫ್ಟ್ ಸಿಟಿ’ಯ ತಂತ್ರಜ್ಞಾನ ಮತ್ತು ಪ್ಲಾನಿಂಗ್ ಅನ್ನು ಮಾದರಿಯಾಗಿ ಬಳಸಿಕೊಳ್ಳಲು ಪ್ರಧಾನಿ ಮೋದಿ ತಿಳಿಸಿದ್ದಾರೆ. ಇದಕ್ಕಾಗಿ ಅಲ್ಲಿನ ಅಧಿಕಾರಿಗಳ ತಂಡ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದೆ.
ಇದನ್ನೂ ಓದಿ:
ಸಾಂಸ್ಕೃತಿಕ ಬಾಂಧವ್ಯ
ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಾಷ್ಕೆಂಟ್‌ನಲ್ಲೇ ನಿಧನರಾಗಿದ್ದರು. ಅವರ ನೆನಪಿಗಾಗಿ ಅಲ್ಲಿರುವ ಸಾಂಸ್ಕೃತಿಕ ಕೇಂದ್ರ ಮತ್ತು ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರಗಳು ಭಾರತದ ಸಂಸ್ಕೃತಿಯನ್ನು ಅಲ್ಲಿ ಪಸರಿಸುತ್ತಿವೆ. ಅಲ್ಲಿನ ಜನರಲ್ಲಿ ಯೋಗ ಕೂಡ ತುಂಬಾ ಜನಪ್ರಿಯವಾಗಿದ್ದು, ಅದಕ್ಕಾಗಿಯೇ ಒಂದು ರಾಷ್ಟ್ರೀಯ ಒಕ್ಕೂಟ ಕೆಲಸ ಮಾಡುತ್ತಿದೆ.
ಇಂದು ತಮ್ಮ ತಾಷ್ಕೆಂಟ್ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ ಅವರು, ಮುಂದಿನ ಎಸ್‌ಸಿಒ ಶೃಂಗಸಭೆಗಾಗಿ ಕಿರ್ಗಿಸ್ತಾನ್‌ನ ಬಿಷ್ಕೆಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.



