October 19, 2026
Monday, October 19, 2026
spot_img

ಜೀವ ರಕ್ಷಣೆಗಾಗಿ ಹಿಡಿದಿದ್ದ ಬಂದೂಕಿನಿಂದ ಗುಂಡು ಸಿಡಿದು ಕಾಫಿ ಬೆಳೆಗಾರ ಸಾವು

ಹೊಸದಿಗಂತ ವರದಿ ಹಾಸನ:

ಕಾಡಾನೆಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಬಂದೂಕು ಹಿಡಿದು ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರರೊಬ್ಬರು ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಮೃತಪಟ್ಟಿರುವ ಘಟನೆ ಬೇಲೂರು ತಾಲ್ಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಂದಹಳ್ಳಿ ಗ್ರಾಮದ ಕೇಶವಶೆಟ್ಟಿ (61) ಮೃತರು. ಗ್ರಾಮದ ಶೈಲೇಶ್ ಎಂಬುವವರಿಗೆ ಸೇರಿದ ಇಶ್ಚಿತ್ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಕೇಶವಶೆಟ್ಟಿ ಅವರು ಬಂದೂಕಿನೊಂದಿಗೆ ಕಾಫಿ ತೋಟಕ್ಕೆ ತೆರಳಿದ್ದರು. ತೋಟದ ಸುತ್ತಮುತ್ತ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಬಂದೂಕು ಹಿಡಿದು ತೆರಳಿದ್ದರು ಎನ್ನಲಾಗಿದೆ. ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಸಿಡಿದಿರಬಹುದು ಎಂದು ಶಂಕಿಸಲಾಗಿದೆ. ಗುಂಡು ತಗುಲಿದ ಬಳಿಕವೂ ಕೇಶವಶೆಟ್ಟಿ ಅವರು ಸುಮಾರು 300 ಮೀಟರ್ ದೂರ ನಡೆದುಕೊಂಡು ಹೋಗಿ ಕುಸಿದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಹಾಗೂ ಎಸ್‌ಒಸಿಓ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬಂದೂಕಿನಿಂದ ಗುಂಡು ಆಕಸ್ಮಿಕವಾಗಿ ಸಿಡಿದಿತೇ ಅಥವಾ ಘಟನೆಗೆ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read