September 1, 2026
Tuesday, September 1, 2026
spot_img

ಬಸವರಾಜ ಕನ್ನಾಳೆ ಹೇಳಿದ ಹಾಗೆ ಕೇಳಿದ್ದೆ : ತಪ್ಪೊಪ್ಪಿಕೊಂಡ ಐಎಎಸ್‌ ಆಫೀಸರ್‌ ಗ್ಯಾನೇಂದ್ರ ಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ನೇಮಕ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯನ್ನು ತೀವ್ರಗೊಳಿಸಿದ್ದು, ಎಐಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ತಾವು ತಪ್ಪು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಸಿಐಡಿ ಅಧಿಕಾರಿಗಳ ಮುಂದೆ ಮಾತನಾಡಿದ ಗ್ಯಾನೇಂದ್ರ ಕುಮಾರ್‌ ಹಗರಣದಲ್ಲಿ ತಮ್ಮ ಪಾತ್ರ ಏನು? ತಮಗೆ ಕುಮ್ಮಕ್ಕು ಕೊಟ್ಟಿದ್ದು ಎನ್ನುವ ಸ್ಫೋಟಕ ಮಾಹಿತಿಯನ್ನು ಒದಗಿಸಿದ್ದಾರೆ. ಇನ್ನು ಹಣ ಕೊಟ್ಟು ಪ್ರಶ್ನೆಪತ್ರಿಕೆಗಳನ್ನು ಖರೀದಿ ಮಾಡಿದ್ದ ಅಭ್ಯರ್ಥಿಗಳೇ ಸಾಕ್ಷಿ ಹೇಳೋಕೆ ಮುಂದಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಕನ್ನಾಳೆ ಹಳೇ ಪರಿಚಯ

ಬೀದರ್‌ನಲ್ಲಿದ್ದಾಗಲೇ ನನಗೆ ಬಸವರಾಜ್‌ ಕನ್ನಾಳೆ ಪರಿಚಯವಾಗಿದ್ದ. ಆತ ತನ್ನನ್ನು ರಾಜಕಾರಣಿ ಎಂದು ಹೇಳಿಕೊಂಡಿದ್ದ. ಆತ ಹೇಳುತ್ತಿದ್ದ ಮಾತುಗಳ ಮೇಲೆ ನನಗೆ ನಂಬಿಕೆ ಇತ್ತು. ನಮ್ಮ ಮನೆ ಹಾಗೂ ಇತರ ಹೊಟೇಲ್‌ಗಳಲ್ಲಿಯೂ ಭೇಟಿಯಾಗಿ ಡೀಲ್‌ ಬಗ್ಗೆ ಚರ್ಚೆ ಮಾಡಿದ್ದೆವು. ಬಸವರಾಜ ಕನ್ನಾಳೆ ಈ ಪ್ರಕರಣದ ಕಿಂಗ್‌ಪಿನ್‌. ಆತ ಹೇಳಿದಂತೆ ನಾನು ಮಾಡುತ್ತಿದ್ದೆ. ಒಬ್ಬ ಅಭ್ಯರ್ಥಿಯನ್ನೂ ನಾನು ಭೇಟಿ ಮಾಡಿಯೇ ಇಲ್ಲ. ಆತನೇ ಮಾತನಾಡಿ ಡೀಲ್‌ ಮಾಡುತ್ತಿದ್ದ. ನನಗೆ ಅಭ್ಯರ್ಥಿಗಳನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಡೀಲ್‌ ಆದ ನಂತರ ಹೇಳುತ್ತಿದ್ದರಷ್ಟೇ ಎಂದು ಗ್ಯಾನೇಂದ್ರ ಕುಮಾರ್‌ ಹೇಳಿದ್ದಾರೆ.

ಪ್ರಿಂಟ್‌ ಆಗುವ ಮೊದಲೇ ಪ್ರಶ್ನೆಗಳನ್ನು ಬರೆದುಕೊಳ್ಳುತ್ತಿದ್ದೆವು

ಪ್ರಶ್ನೆಪತ್ರಿಕೆ ಪ್ರಿಂಟ್‌ ಆದ ನಂತರ ಅದನ್ನು ನೇರವಾಗಿ ಹೊರಗೆ ತೆಗೆದು ಕಾಪಿ ಮಾಡಿಸಿ ಅಥವಾ ಫೋಟೊ ತೆಗೆದು ಕೊಟ್ಟಿಲ್ಲ. ಪ್ರಿಂಟ್‌ ಆಗುವ ಮುನ್ನವೇ ಶೇ.೬ಒರಷ್ಟು ಪ್ರಶ್ನೆಗಳನ್ನು ಬರೆದು ಇಟ್ಟುಕೊಂಡಿದ್ದೆವು. ನಾವು ಬರೆದುಕೊಂಡಿದ್ದ ಪ್ರಶ್ನೆಗಳ ಸರಣಿಯನ್ನೇ ಪ್ರಿಂಟ್‌ ಮಾಡಲು ಒಪ್ಪಿಗೆ ನೀಡಿದ್ದೆ ಎಂದು ಹೇಳಿದ್ದಾರೆ.

ಕನ್ನಾಳೆ ಮನೆ ಮೇಲೆ ಸಿಐಡಿ ದಾಳಿ

ಬಸವರಾಜ ಕನ್ನಾಳೆ ಅರೆಸ್ಟ್‌ ಆದ ನಂತರ ಅವರ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬರೀ ಹನ್ನೆರಡು ಸಾವಿರದಷ್ಟು ಸಂಬಳ ಪಡೆಯುವ ಕನ್ನಾಳೆ ಬಳಿ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದೆ. ಇದರ ಜೊತೆಗೆ ಮನೆಯಲ್ಲಿ ಆರು ಅಭ್ಯರ್ಥಿಗಳ ಹಾಲ್‌ ಟಿಕೆಟ್‌, ಬಿ ಗ್ರೂಪ್‌ ಪರೀಕ್ಷೆಯ ಹಾಲ್‌ ಟಿಕೆಟ್‌ಗಳೂ ಪತ್ತೆಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !