October 11, 2026
Sunday, October 11, 2026
spot_img

ಭಯೋತ್ಪಾದನೆ ವಿಷಯದಲ್ಲಿ ದ್ವಂದ್ವ ನೀತಿಗೆ ಅವಕಾಶ ಇಲ್ಲ: ಪಾಕ್‌ ಪ್ರಧಾನಿ ಎದುರಲ್ಲೇ ಗುಡುಗಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಯೋತ್ಪಾದನೆಯಂತಹ ಗಂಭೀರವಾದ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿಗೆ ಅವಕಾಶ ಇಲ್ಲ. ಇದನ್ನು ಬುಡ ಸಮೇತ ಕಿತ್ತು ಹಾಕುವ ಅಗತ್ಯ ಇದೆ ಎಂದು ಪ್ರಧಾನಿ ಮೋದಿ ಪಾಕಿಸ್ತಾನ ಪ್ರಧಾನಿ ಎದುರೇ ಗುಡುಗಿದ್ದಾರೆ.

26ನೇ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿ, ಉಗ್ರರಿಗೆ ಆಶ್ರಯ ಹಾಗೂ ಬೆಂಬಲ ನೀಡುವ ರಾಷ್ಟ್ರಗಳಿಗೆ ಕಠಿಣ ಸಂದೇಶ ರವಾನಿಸಬೇಕು ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಎದುರಲ್ಲೇ ಹೇಳಿದ್ದಾರೆ.

ಭಯೋತ್ಪಾದನೆ ಯಾವುದೇ ದೇಶದ ಬಹುದೊಡ್ಡ ವೈರಿ. ಇಂತಹ ಗಂಭೀರ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿಗೆ ಅವಕಾಶವಿಲ್ಲ ಎಂಬುದನ್ನ ನಾವು ಒಕ್ಕೊರಲಿನಿಂದ ಹೇಳಬೇಕು. ಭಯೋತ್ಪಾದನೆಯನ್ನ ನೀತಿಯ ಸಾಧನವಾಗಿ ಬಳಸುವ, ಭಯೋತ್ಪಾದಕರಿಗೆ ಆಶ್ರಯ ಮತ್ತು ಬೆಂಬಲ ನೀಡುವ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ನೀಡಬೇಕು. ಭಯೋತ್ಪಾದನೆ ಎಂಬುದು ಯಾರೊಬ್ಬರಿಗೂ ತಂತ್ರಗಾರಿಕೆಯ ಅಸ್ತ್ರವಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ಮೋದಿ ಮತ್ತು ಶೆಹಬಾಜ್ ಷರೀಫ್ ಜೊತೆಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ, ಕಜಕಿಸ್ತಾನದ ಅಧ್ಯಕ್ಷ ಕಾಸಿಂ-ಜೊಮಾರ್ಟ್ ಟೋಕಾಯೆವ್, ಉಜ್ಬೇಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಹಾಗೂ ತಜಿಕಿಸ್ತಾನದ ಅಧ್ಯಕ್ಷ ಎಮೋಮಲಿ ರಹಮೋನ್ ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದುವರಿದು ಮಾತನಾಡಿದ ಪ್ರಧಾನಿಗಳು, ಮಾದಕವಸ್ತುಗಳ ಕಳ್ಳಸಾಗಣೆಯು ಯುವಜನತೆ ಹಾಗೂ ಪ್ರಾದೇಶಿಕ ಭದ್ರತೆಗೆ ಹೆಚ್ಚುತ್ತಿರುವ ಅಪಾಯವಾಗಿದೆ. ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧದ ವಿರುದ್ಧ ಎಸ್‌ಸಿಒ ರಾಷ್ಟ್ರಗಳ ನಡುವೆ ಮತ್ತಷ್ಟು ಸಹಕಾರ ಅಗತ್ಯ ಎಂದು ಒತ್ತಿ ಹೇಳಿದರು.

Must Read