September 1, 2026
Tuesday, September 1, 2026
spot_img

ನಾಗೇಂದ್ರ ರಾಜೀನಾಮೆಯಿಂದ ನಮ್ಮ ಹೋರಾಟ ನಿಲ್ಲಲ್ಲ, ಇನ್ನಷ್ಟು ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಆರ್‌.ಅಶೋಕ

ಹೊಸದಿಗಂತ ವರದಿ ರಾಯಚೂರು:

ಬಿ.ನಾಗೇಂದ್ರ ರಾಜೀನಾಮೆ ನೀಡಿದ ಕೂಡಲೇ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ. ಬರಗಾಲ, ಕೆಪಿಎಸ್‌ಸಿ ಹಗರಣ, ಬಿಡದಿ ಟೌನ್‌ಶಿಪ್‌ ಮೊದಲಾದ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟದಿಂದಾಗಿ ಇನ್ನಷ್ಟು ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಬಿಜೆಪಿ ವತಿಯಿಂದ ಹಮ್ಮಿಕೊಂಡ ಬಳ್ಳಾರಿ ಚಲೋ ಪಾದಯಾತ್ರೆಯ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷೀಲಿ ಎಂದಂತೆ ಸಿದ್ದರಾಮಯ್ಯನವರ ಸರ್ಕಾರ ಹೋಗಿ ಡಿ.ಕೆ.ಶಿವಕುಮಾರ್‌ ಸರ್ಕಾರ ಬಂದಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ದರೋಡೆ ಮಾಡುತ್ತಿದ್ದರೆ, ಡಿಕೆಶಿ ಸರ್ಕಾರ ಪಿಕ್‌ ಪಾಕೆಟ್‌ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹಾಲು, ಆಲ್ಕೋಹಾಲ್‌, ಯೂರಿಯಾ ಮೊದಲಾದವುಗಳ ಮೇಲೆ ತೆರಿಗೆ ಹಾಕಿ ಪಿಕ್‌ ಪಾಕೆಟ್‌ ಮಾಡಲಾಗುತ್ತಿದೆ. 175 ತಾಲೂಕುಗಳಲ್ಲಿ ಬರಗಾಲವಿದ್ದರೂ ಹಣವಿಲ್ಲದೆ 74 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿಲ್ಲ. ಒಂದೋ ಘೋಷಣೆ ಮಾಡಬೇಕು, ಇಲ್ಲವಾದರೆ ಪಾಪರ್‌ ಆಗಿದ್ದೇವೆಂದು ಒಪ್ಪಿಕೊಳ್ಳಬೇಕು. ಸೂರ್ಯಕಾಂತಿ, ಜೋಳ, ತೊಗರಿ ಮೊದಲಾದ ಬೆಳೆಗಳು ಅರ್ಧ ಮಾತ್ರ ಬೆಳೆದು ಫಲಸು ನೀಡದೆ ಹಾಳಾಗಿವೆ. ಮಾನ ಮರ್ಯಾದೆ ಇದ್ದಿದ್ದರೆ ಈಗಾಗಲೇ ರೈತರಿಗೆ ಪರಿಹಾರ ನೀಡಬೇಕಿತ್ತು ಎಂದರು.

ಇದನ್ನೂ ಓದಿ:

ಕಾಂಗ್ರೆಸ್‌ ಸರ್ಕಾರ ಈವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಗ್ರಾಮಗಳಲ್ಲಿ ಜನರು ಇನ್ನೂ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಇದರ ನಡುವೆ ಸಿಎಂ ಡಿ.ಕೆ.ಶಿವಕುಮಾರ್‌ ಅಧ್ಯಯನ ಮಾಡಲು ಪ್ರವಾಸ ಮಾಡುತ್ತಿದ್ದಾರೆ. ಅಧಿಕಾರ ಕೈಯಲ್ಲಿ ಇರುವಾಗ ಅಧ್ಯಯನ ಏಕೆ ಮಾಡಬೇಕು? ಹೊಸ ಮುಖ್ಯಮಂತ್ರಿ ಮೂರು ತಿಂಗಳಾದರೂ ಒಂದೇ ಒಂದು ಉತ್ತಮ ಕೆಲಸ ಮಾಡಿಲ್ಲ. ನಮ್ಮ ಹೋರಾಟದಿಂದಾಗಿ ಬಿ.ನಾಗೇಂದ್ರ ಅವರಿಗೆ ಗೇಟ್‌ ಪಾಸ್‌ ನೀಡಲಾಗಿದೆ. ಆದರೆ ಇಲ್ಲಿ ನಾಗೇಂದ್ರ ಕೇವಲ ಬಲಿಪಶು. ವಾಲ್ಮೀಕಿ ನಿಗಮದ 187 ಕೋಟಿ ರೂ. ಕಾಂಗ್ರೆಸ್‌ ಹೈಕಮಾಂಡ್‌ಗೆ ತಲುಪಿದೆ. ತೆಲಂಗಾಣ ಚುನಾವಣೆ, ಬಳ್ಳಾರಿ ಚುನಾವಣೆಗೆ ಈ ಹಣ ಬಳಕೆಯಾಗಿದೆ. ನಾಗೇಂದ್ರ ಕದ್ದಿದ್ದು ಮಾತ್ರ, ಅದನ್ನು ಬಳಸಿದ್ದು ಇಡೀ ಕಾಂಗ್ರೆಸ್‌ ಪಕ್ಷ ಎಂಬುದನ್ನು ಮರೆಯಬಾರದು ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !