ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲು ಸಾಲು ಹಬ್ಬಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ ಸಕ್ಕರೆ ಬೆಲೆ ಗಗನಕ್ಕೇರುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಯಾಗದಂತೆ ನೋಡಿಕೊಳ್ಳಲು ಮತ್ತು ಕೃತಕ ಅಭಾವ ಸೃಷ್ಟಿಸುವುದನ್ನು ತಡೆಯಲು, ಸಕ್ಕರೆ ವ್ಯಾಪಾರಿಗಳ ಮೇಲಿದ್ದ ಸ್ಟಾಕ್ ಇಟ್ಟುಕೊಳ್ಳುವ ಮಿತಿಯನ್ನು ಅರ್ಧಕ್ಕರ್ಧ ಕಡಿತಗೊಳಿಸಿದೆ.
ಹೊಸ ನಿಯಮದ ಪ್ರಕಾರ, ಸಕ್ಕರೆ ವ್ಯಾಪಾರಿಗಳು ಇನ್ಮುಂದೆ 4,000 ಕ್ವಿಂಟಾಲ್ ಬದಲಿಗೆ ಗರಿಷ್ಠ 2,000 ಕ್ವಿಂಟಾಲ್ ಸಕ್ಕರೆಯನ್ನು ಮಾತ್ರ ಸಂಗ್ರಹಿಸಿಟ್ಟುಕೊಳ್ಳಬಹುದು. ಈ ಆದೇಶವು ಇದೇ ಸೆಪ್ಟೆಂಬರ್ 15 ರಿಂದ ನವೆಂಬರ್ 30 ರವರೆಗೆ ಜಾರಿಯಲ್ಲಿರಲಿದೆ.
ಕೊಲ್ಕತ್ತಾಗೆ ಮಾತ್ರ ವಿನಾಯಿತಿ
ಸಕ್ಕರೆ ವ್ಯಾಪಾರಿಗಳು ತಮಗೆ ಸಕ್ಕರೆ ಸರಬರಾಜಾದ ದಿನದಿಂದ 30 ದಿನಗಳಿಗಿಂತ ಹೆಚ್ಚು ಕಾಲ ಸ್ಟಾಕ್ ಇಟ್ಟುಕೊಳ್ಳುವಂತಿಲ್ಲ. ಆದರೆ, ಪಶ್ಚಿಮ ಬಂಗಾಳದ ಕೊಲ್ಕತ್ತಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಅಲ್ಲಿ ಹಳೆಯ 4,000 ಕ್ವಿಂಟಾಲ್ ಮಿತಿಯೇ ಮುಂದುವರಿಯಲಿದೆ. ಕೊಲ್ಕತ್ತಾ ಮಾರುಕಟ್ಟೆಯು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಸಕ್ಕರೆ ತರಿಸಿ, ಇಡೀ ಈಶಾನ್ಯ ಭಾರತಕ್ಕೆ ಸರಬರಾಜು ಮಾಡುವುದರಿಂದ ಅಲ್ಲಿನ ಮಾರುಕಟ್ಟೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬೆಲೆ ಏರಿಕೆಯ ಶಾಕ್
ಕಳೆದ ಒಂದು ವರ್ಷದಲ್ಲಿ ಸಕ್ಕರೆ ಬೆಲೆ ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಹಾಕಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷ ಆಗಸ್ಟ್ನಲ್ಲಿ ಕೆಜಿಗೆ 46.02 ರೂ. ಇದ್ದ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ, ಈ ವರ್ಷ ಆಗಸ್ಟ್ 31 ರ ವೇಳೆಗೆ ಬರೋಬ್ಬರಿ ಶೇಕಡಾ 37 ರಷ್ಟು ಏರಿಕೆಯಾಗಿ 63.28 ರೂಪಾಯಿಗೆ ತಲುಪಿದೆ. ಇತ್ತ ಸಗಟು ದರವೂ ಶೇಕಡಾ. 36 ರಷ್ಟು ಹೆಚ್ಚಾಗಿದ್ದು, ಕೆಜಿಗೆ 58.40 ರೂ. ಆಗಿದೆ.
ಇದನ್ನೂ ಓದಿ:
ಗಿರಣಿಗಳ ವಿರುದ್ಧ ಕೇಂದ್ರದ ಅಸಮಾಧಾನ
ದೇಶದಲ್ಲಿ ಸಕ್ಕರೆಯ ಕೊರತೆಯೇ ಇಲ್ಲದಿದ್ದರೂ, ಸಕ್ಕರೆ ಗಿರಣಿಗಳು ಕೃತಕವಾಗಿ ಬೆಲೆ ಏರಿಕೆ ಮಾಡುತ್ತಿವೆ ಎಂದು ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಾರಿ ದೇಶದಲ್ಲಿ ಸಕ್ಕರೆ ಉತ್ಪಾದನೆಯು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಕಡಿಮೆಯಾಗಿ 306 ಲಕ್ಷ ಟನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ದೇಶದ ವಾರ್ಷಿಕ ಸಕ್ಕರೆ ಬೇಡಿಕೆ ಇರುವುದು ಕೇವಲ 280 ರಿಂದ 285 ಲಕ್ಷ ಟನ್ಗಳು ಮಾತ್ರ. ಅಂದ್ರೆ ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಇರುವುದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆಹಾರ ಸಚಿವಾಲಯ ಸ್ಪಷ್ಟಪಡಿಸಿದೆ. ಸರ್ಕಾರದ ಈ ಹೊಸ ಕ್ರಮದಿಂದಾಗಿ ಮುಂಬರುವ ಹಬ್ಬದ ದಿನಗಳಲ್ಲಿ ಸಕ್ಕರೆ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.



