September 2, 2026
Wednesday, September 2, 2026
spot_img

ಗಂಡುಮಕ್ಕಳು ಅತ್ತರೆ ತಪ್ಪೇನು? ಮಕ್ಕಳ ಪಾಲನೆ ಬಗ್ಗೆ ರಹಸ್ಯ ಬಿಚ್ಚಿಟ್ಟ ಬಾಲಿವುಡ್ ಬೇಬೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರಿಗೂ ಒಂದು ದೊಡ್ಡ ಸವಾಲು. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ತರಹದ ಪದ್ಧತಿ ಇರುತ್ತೆ. ಕೆಲವರು ಶಿಸ್ತು, ಕಟ್ಟುನಿಟ್ಟು ಅಂತ ಮಕ್ಕಳಿಗೆ ಬುದ್ಧಿ ಹೇಳಿದರೆ, ಇನ್ನು ಕೆಲವರು ಮಕ್ಕಳ ಮನಸ್ಸಿನ ಭಾವನೆಗಳಿಗೆ ಹೆಚ್ಚು ಬೆಲೆ ನೀಡುತ್ತಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಇಬ್ಬರು ಗಂಡು ಮಕ್ಕಳಾದ ತೈಮೂರ್ ಮತ್ತು ಜೇಹ್ ವಿಚಾರದಲ್ಲಿ ಎರಡನೇ ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮಕ್ಕಳ ಜೊತೆ ಮುಕ್ತವಾಗಿ ಮಾತನಾಡುವ, ಅವರ ಭಾವನೆಗಳನ್ನು ಗೌರವಿಸುವ ಸರಳ ಅಮ್ಮನಾಗಿ ಕರೀನಾ ಕೆಲವೊಂದಿಷ್ಟು ಪೇರೆಂಟಿಂಗ್ ವಿಷಯವಾಗಿ ಮಾತನಾಡಿದ್ದಾರೆ.

ಇತ್ತೀಚೆಗೆ ತಮ್ಮ ಹೊಸ ಸಿನಿಮಾ ‘ದಾಯರಾ’ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಕರೀನಾ, ಇಂದಿನ ಕಾಲದಲ್ಲಿ ಗಂಡುಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. “ನಾನೂ ಇಬ್ಬರು ಗಂಡುಮಕ್ಕಳ ಅಮ್ಮ. ಒಬ್ಬ ತಾಯಿಯಾಗಿ ನನಗೂ ಭಯ ಇರುತ್ತೆ, ಅಂಜಿಕೆಯಾಗುತ್ತದೆ. ಯಾಕಂದರೆ ಒಬ್ಬ ತಾಯಿಯಾಗಿ ಮಕ್ಕಳಿಗೆ ಅತ್ಯುತ್ತಮವಾದದ್ದನ್ನೇ ಕೊಡಬೇಕು, ಅವರನ್ನು ಕಾಪಾಡಬೇಕು ಮತ್ತು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಬೇಕು ಎಂಬ ಆಸೆ ನನಗೂ ಇದೆ. ಅದಕ್ಕೆಲ್ಲಕ್ಕಿಂತ ಹೆಚ್ಚಾಗಿ ನನ್ನ ಮಕ್ಕಳು ದಯೆ ಮತ್ತು ಕರುಣೆ ಉಳ್ಳವರಾಗಬೇಕು ಅಂತ ದಿನ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಇಂದಿನ ಗಂಡುಮಕ್ಕಳಿಗೆ ಮತ್ತು ಪುರುಷರಿಗೆ ಈ ದಯೆಯ ಗುಣ ತುಂಬಾನೇ ಮುಖ್ಯ” ಎಂದು ಕರೀನಾ ಹೇಳಿದ್ದಾರೆ.

ಸಮಾಜದಲ್ಲಿ ಹೆಣ್ಣುಮಕ್ಕಳು ಮಾತ್ರ ಬೇಗ ಭಾವುಕರಾಗುತ್ತಾರೆ, ಗಂಡುಮಕ್ಕಳು ಗಟ್ಟಿಯಾಗಿರಬೇಕು ಎಂಬ ಮಾತಿದೆ. ಆದರೆ ಇದನ್ನು ಕರೀನಾ ಕಡಾಖಂಡಿತವಾಗಿ ತಳ್ಳಿಹಾಕಿದ್ದಾರೆ. “ಹೆಣ್ಣುಮಕ್ಕಳು ಮಾತ್ರ ಸೂಕ್ಷ್ಮ ಮನಸ್ಸಿನವರು ಎಂಬುದು ತಪ್ಪು ಕಲ್ಪನೆ. ಇವತ್ತಿನ ಕಾಲದ ಗಂಡುಮಕ್ಕಳಿಗೆ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಹಾಕಲು ಯಾವುದೇ ಹೆದರಿಕೆಯಿಲ್ಲ. ಅಮ್ಮನ ಮುಂದಾಗಲಿ ಅಥವಾ ಬೇರೆಯವರ ಮುಂದಾಗಲಿ ಕಣ್ಣೀರು ಹಾಕಲು ಹಿಂಜರಿಯಬೇಕಿಲ್ಲ. ನಾನು ಯಾವಾಗಲೂ ನನ್ನ ಮಗನಿಗೆ ಒಂದೇ ಮಾತು ಹೇಳುತ್ತೇನೆ ನಿನಗೆ ಅಳಬೇಕು ಅನ್ನಿಸಿದರೆ ಮನಸ್ಸಾರೆ ಅತ್ತು ಬಿಡು, ಅದರಲ್ಲಿ ಯಾವುದೇ ತಪ್ಪಿಲ್ಲ. ಆ ಭಾವನೆಯನ್ನು ಅನುಭವಿಸುವುದು ಮತ್ತು ತಿಳಿದುಕೊಳ್ಳುವುದು ಜೀವನಕ್ಕೆ ಬಹಳ ಮುಖ್ಯ” ಎಂದು ಕರೀನಾ ತಮ್ಮ ಪೋಷಕತ್ವದ ಸತ್ಯವನ್ನು ಹಂಚಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !