ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಲಕ್ಷ್ಮೀ ದುಡ್ಡು ಬಂದಮೇಲೆ ನಿಮಗೆ ಫೋನ್ ಮಾಡ್ತೀನಿ ಆಯ್ತಾ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮಹಿಳೆಯರೊಂದಿಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದು, ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಮಾತುಕತೆಯ ದೃಶ್ಯವಿದೆ. ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಿಎಂ ತದನಂತರ ಅಲ್ಲೇ ಇದ್ದ ರೈತ ಮಹಿಳೆಯರ ಜತೆ ಮಾತಿಗಿಳಿದಿದ್ದಾರೆ.
ನಿಮಗೆಲ್ಲಾ ಗೃಹಲಕ್ಷ್ಮೀ ಹಣ ಬರುತ್ತಿದೆಯಾ ಎಂದು ಸಿಎಂ ಪ್ರಶ್ನಿಸಿದಾಗ ಮಹಿಳೆಯರು ಹೌದು ಎರಡು ಸಾವಿರ ರೂಪಾಯಿ ಬರುತ್ತಿದೆ ಎಂದು ಹೇಳಿದ್ದಾರೆ. ನಿಮಗೆ ಈ ಹಣವನ್ನು ಯಾರು ಕೊಡುತ್ತಿದ್ದಾರೆ ಗೊತ್ತೇ ಎಂದು ಪ್ರಶ್ನಿಸಿದಾಗ ಮಹಿಳೆಯರು ನೀವೇ ಅಲ್ವಾ ಸಾರ್ ಎಂದು ನಕ್ಕಿದ್ದಾರೆ.
ತದನಂತರ ಮನೆಗೆ ಕರೆಂಟ್ ಇದೆಯಾ? ಗೃಹಜ್ಯೋತಿಯ ಅನ್ವಯ ಬಿಲ್ ಶೂನ್ಯ ಆಗಿದೆಯಾ? ಗೃಹಜ್ಯೋತಿ ರಿನೀವಲ್ ಆಯ್ತಾ ಎಂದೆಲ್ಲಾ ಸಿಎಂ ಪ್ರಶ್ನಿಸಿದ್ದಾರೆ ಅದಕ್ಕೆ ಮಹಿಳೆಯರು ಹೌದು ಎಂದು ಉತ್ತರಿಸಿದ್ದಾರೆ. ನಮ್ಮ ಗ್ಯಾರಂಟಿಗಳೆಲ್ಲಾ ಇರೋದು ನಿಮಗೋಸ್ಕರವೇ. ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿ ಆತ್ಮೀಯವಾಗಿ ಮಾತನಾಡಿದ್ದಾರೆ.



