ಹೊಸದಿಗಂತ ವರದಿ ಹಾಸನ:
ಸೈಕಲ್‌ನಲ್ಲಿ ತೆರಳುತ್ತಿದ್ದ 15 ವರ್ಷದ ಬಾಲಕನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಮೃತ ಬಾಲಕ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಪುಟ್ಟಸ್ವಾಮಿ ಅವರ ಎರಡನೇ ಪುತ್ರ ಪಂಕಜ್. ಹಾಸನದ ಹೊಸಕೊಪ್ಪಲಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಪಂಕಜ್, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಪುಟ್ಟಸ್ವಾಮಿ ಅವರು ಕಾರೊಂದನ್ನು ಗ್ಯಾರೇಜ್‌ಗೆ ರಿಪೇರಿಗಾಗಿ ಬಿಟ್ಟಿದ್ದು, ಕಾರು ರಿಪೇರಿಯಾಗಿದೆಯೇ ಎಂದು ನೋಡಲು ಪಂಕಜ್ ಸೈಕಲ್‌ನಲ್ಲಿ ಗ್ಯಾರೇಜ್‌ನತ್ತ ತೆರಳುತ್ತಿದ್ದ ವೇಳೆ KA-46-5852 ನೋಂದಣಿ ಸಂಖ್ಯೆಯ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕನ ಮೇಲೆ ಲಾರಿಯ ಮುಂಭಾಗದ ಚಕ್ರ ಹರಿದಿದೆ. ಸ್ಥಳೀಯರು ಕೂಡಲೇ ಬಾಲಕನನ್ನು ಆಟೋದಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಪಂಕಜ್ ಮೃತಪಟ್ಟಿದ್ದ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



