ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಪ್ರತಿಷ್ಟಿತ ಹೊಟೇಲ್, ಕ್ಲಬ್ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ ಮುಂದುವರಿದಿದ್ದು, ಸಹಕಾರನಗರದಲ್ಲಿರುವ ಚೇರ್ಮೆನ್ಸ್ ಕ್ಲಬ್ ಕಿಚನ್ ಮೇಲೆ ದಾಳಿ ನಡೆಸಿ ಅಡುಗೆ ಮನೆಯನ್ನು ಸಂಪೂರ್ಣ ಸೀಲ್ ಮಾಡಲಾಗಿದೆ.
ರಾಜ್ಯದಲ್ಲಿ ಇದೀಗ ಆಹಾರ ಸುರಕ್ಷತಾ ಅಧಿಕಾರಿಗಳು ತೀವ್ರ ಆಕ್ಟೀವ್ ಆಗಿದ್ದು, ಹೊಟೇಲ್ಗಳ ಮೇಲೆ ದಿಢೀರ್ ದಾಳಿ ನಡೆಸಿ ಮಾಲೀಕರಿಗೆ ಶಾಕ್ ನೀಡುತ್ತಿದ್ದಾರೆ. ಇಂದು ಬೆಳಗ್ಗೆ ಚೇರ್ಮೆನ್ಸ್ ಕ್ಲಬ್ ಕಿಚನ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಅಡುಗೆ ಮನೆ ನೋಡಿ ಶಾಕ್ ಆಗಿದೆ. ಎಕ್ಸ್ಪೈರಿ ಡೇಟ್ ಆಗಿ ಹೋಗಿರುವ ಆಹಾರ ಪದಾರ್ಥಗಳು, ಗಲೀಜು ವಾತಾವರಣ ಹಾಗೂ FSSAI ನಿಯಮಗಳನ್ನು ಪಾಲಿಸದೇ ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾಗಿಲಿಗೆ ಹಳದಿ ಪಟ್ಟಿ ಅಂಟಿಸಿ ಸೀಝ್ ಮಾಡಿದ್ದಾರೆ.
ಬರೋಬ್ಬರು 40 ಕೆಜಿಯಷ್ಟು ಎಕ್ಸ್ಪೈರಿ ಡೇಟ್ ಆಗಿರುವ ಮೆಣಸಿನಕಾಯಿ, ಐದು ಕೆಜಿಯಷ್ಟು ಬ್ರೆಡ್ ಪುಡಿ, ಎರಡು ಕೆಜಿಯಷ್ಟು ಜೀರಿಗೆಯನ್ನು ವಶಕ್ಕೆ ಪಡೆಯಲಾಗಿದೆ. ಈ ಪದಾರ್ಥಗಳ ಮೇಲೆ ಇರುವ ಲೇಬಲಿಂಗ್ನಲ್ಲಿ ಕೂಡ ಸಮಸ್ಯೆ ಇದೆ ಎಂದು ಹೇಳಲಾಗಿದೆ. ಆಹಾರ ಉತ್ಪನ್ನಗಳ ಮೇಲೆ FSSAI ನಿಯಮಗಳನ್ನು ಪಾಲಿಸದೆ ಲೇಬಲ್ ಹಾಕಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಕಟ್ಟೆ, ಪಾತ್ರೆ ತೊಳೆಯುವ ಜಾಗ ಇನ್ನಿತರ ಸ್ಥಳಗಳಲ್ಲಿ ಕೊಳಕು ಕಾಣಿಸಿದೆ. ಅಡುಗೆ ಮನೆಯಲ್ಲಿ ಕೊಳೆತ ತರಕಾರಿಗಳಿಂದ ವಾಸನೆಯೂ ಬಂದಿದೆ. ವೆಜ್ ಹಾಗೂ ನಾನ್ವೆಜ್ ಪದಾರ್ಥ ಒಂದೇ ಕಡೆ ಸಂಗ್ರಹಿಸಲಾಗಿದೆ. ಜೊತೆಗೆ ಕೃತಕ ಬಣ್ಣಗಳ ಡಬ್ಬಿಯೂ ಕಾಣಿಸಿದೆ. ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ ಎಂದು ಹೇಳಲಾಗಿದೆ.



