ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ಉಗ್ರನಿಂದ ಒಂದು ಎಕೆ ರೈಫಲ್ ಹಾಗೂ ಸ್ಫೋಟಕಗಳು ಸೇರಿದಂತೆ ಹಲವು ಯುದ್ಧೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಬುದ್ಗಾಮ್ ಜಿಲ್ಲೆಯ ಅಶ್ದಾರ್ ಗಲಿಎಂಬಲ್ಲಿ ಶಂಕಿತ ಉಗ್ರರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಭದ್ರತಾ ಪಡೆಗಳಿಗೆ ನಿಖರವಾದ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ತಕ್ಷಣವೇ ಜಂಟಿ ಶೋಧ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡವು. ಕಾಶ್ಮೀರ ಕಣಿವೆಯ ಭದ್ರತೆಯ ಉಸ್ತುವಾರಿ ಹೊತ್ತಿರುವ ಸೇನೆಯ ‘ಚಿನಾರ್ ಕಾರ್ಪ್ಸ್’ ಈ ಕಾರ್ಯಾಚರಣೆಯ ಸಂಪೂರ್ಣ ವಿವರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದೆ.
ಗುಂಡಿನ ದಾಳಿ ನಡೆಸಿದ ಉಗ್ರರು
ಸೇನೆಯ ಪ್ರಕಟಣೆಯ ಪ್ರಕಾರ, ಅಶ್ದಾರ್ ಗಲಿ ಪ್ರದೇಶದಲ್ಲಿ ಜಂಟಿ ಪಡೆಯ ಸೈನಿಕರು ಗಸ್ತು ತಿರುಗುತ್ತಿದ್ದಾಗ ಶಂಕಿತ ವ್ಯಕ್ತಿಗಳ ಚಲನವಲನ ಕಂಡುಬಂದಿದೆ. ತಕ್ಷಣವೇ ಎಚ್ಚೆತ್ತ ಸೈನಿಕರು ಉಗ್ರರಿಗೆ ಶರಣಾಗುವಂತೆ ಹೇಳಿದರು. ಆದರೆ, ಇದಕ್ಕೆ ಪ್ರತಿಕ್ರಿಯಿಸದ ಉಗ್ರರು ಭದ್ರತಾ ಪಡೆಗಳ ಮೇಲೆ ದಿಢೀರನೆ ಮನಬಂದಂತೆ ಗುಂಡಿನ ದಾಳಿ ಮಾಡಿದ್ದರು. ಇದರಿಂದಾಗಿ ಎರಡು ಕಡೆಯ ನಡುವೆ ತೀವ್ರ ಗುಂಡಿನ ಚಕಮಕಿ ಆರಂಭವಾಯಿತು. ಸೈನಿಕರು ನಡೆಸಿದ ಪ್ರತಿ ದಾಳಿಗೆ ಓರ್ವ ಉಗ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ:
ಮುಂದುವರಿದ ಶೋಧ ಕಾರ್ಯ
ಎನ್ಕೌಂಟರ್ ಬಳಿಕ ಸ್ಥಳದಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅರಣ್ಯ ಪ್ರದೇಶದಲ್ಲಿ ಇನ್ನೂ ಯಾರಾದರೂ ಉಗ್ರರು ಅಡಗಿಕೊಂಡಿದ್ದಾರೆಯೇ ಎಂದು ಪತ್ತೆಹಚ್ಚಲು ಅಶ್ದಾರ್ ಗಲಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.



