September 4, 2026
Friday, September 4, 2026
spot_img

ಅಂಬೇವಾಡಿಯಲ್ಲಿ ಚಿರತೆ ಹಾವಳಿ: ಹಗಲು-ರಾತ್ರಿ ಭಯದಲ್ಲಿ ಬದುಕುತ್ತಿರುವ ನಿವಾಸಿಗಳು

ಹೊಸದಿಗಂತ ವರದಿ ದಾಂಡೇಲಿ:

ನಗರದ ಅಂಬೇವಾಡಿ ಭಾಗವನ್ನು ಚಿರತೆಯೊಂದು ತನ್ನ ಆಲಯವನ್ನಾಗಿಸಿಕೊಂಡಂತೆ ಪ್ರತಿದಿನ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಿದೆ.

ಗುರುವಾರ ತಡರಾತ್ರಿ ಅಂಬೇವಾಡಿಯ ಹೋಮ್‌ಸ್ಟೇ ಸಮೀಪ ಚಿರತೆಯೊಂದು ಓಡಾಡುತ್ತಿರುವುದು ಕಂಡುಬಂದಿದೆ. ಬೆಳಗಾವಿಯಿಂದ ದಾಂಡೇಲಿಗೆ ಬರುತ್ತಿದ್ದ ದಾಂಡೇಲಿಯ ಸಂಜಯ ಕಲ್ಯಾಣಿ ಅವರು ಚಿರತೆಯನ್ನು ಕಂಡಿದ್ದು, ತಕ್ಷಣ ದೂರದಲ್ಲೇ ತಮ್ಮ ವಾಹನ ನಿಲ್ಲಿಸಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಕಳೆದ ಕೆಲವು ದಿನಗಳಿಂದ ಅಂಬೇವಾಡಿ, ಕೆಪಿಟಿಸಿಎಲ್ ಗ್ರಿಡ್, ಸುತ್ತಮುತ್ತ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ರಾತ್ರಿ ವೇಳೆ ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕುವಂತಾಗಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಅಂಬೇವಾಡಿ ಭಾಗದಲ್ಲಿ ಬೋನು ಅಳವಡಿಸಿ, ಚಿರತೆಯನ್ನು ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !