ಹೊಸದಿಗಂತ ಡಿಜಿಟಲ್ ಡೆಸ್ಕ್:
ದಶಕಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಹಿಂಸಾಚಾರ ತಾರಕಕ್ಕೇರಿದೆ. ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ (BLA) ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಪಾಕಿಸ್ತಾನದ ಕನಿಷ್ಠ 25 ಸೈನಿಕರು ಮೃತಪಟ್ಟಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಬಿಎಲ್‌ಎ ಸಂಘಟನೆಯು ಸ್ಫೋಟಗಳು, ನಿರಂತರ ಗುಂಡಿನ ಚಕಮಕಿ ಮತ್ತು ಪಾಕ್ ಸೇನೆಯ ಟ್ರಕ್‌ಗಳು ಹೊತ್ತಿ ಉರಿಯುತ್ತಿರುವ ಭೀಕರ ದೃಶ್ಯಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಪಾಕ್ ಸೇನೆಗೆ ಸವಾಲು ಹಾಕಿದೆ.
ಜಿಯಾರತ್ ಕ್ರಾಸ್‌ನಲ್ಲಿ ಭೀಕರ ದಾಳಿ
ಬಿಎಲ್‌ಎ ಸಂಘಟನೆಯು ಜಿಯಾರತ್ ಕ್ರಾಸ್ ಬಳಿ ಚಲಿಸುತ್ತಿದ್ದ ಪಾಕಿಸ್ತಾನಿ ಸೇನಾ ವಾಹನಗಳ ಸಾಲನ್ನು ಗುರಿಯಾಗಿಸಿ ಈ ದಾಳಿ ನಡೆಸಿದೆ. ಸೇನಾ ಕಾನ್ವಾಯ್ ಮೇಲೆ ಮುಗಿಬಿದ್ದ ಹೋರಾಟಗಾರರು ನಡೆಸಿದ ಭೀಕರ ದಾಳಿಗೆ ಎರಡು ಮಿಲಿಟರಿ ವಾಹನಗಳು ಸಂಪೂರ್ಣವಾಗಿ ಭಸ್ಮವಾಗಿದ್ದು, 18 ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಎಲ್‌ಎ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ರಸ್ತೆಯುದ್ದಕ್ಕೂ ಸೈನಿಕರ ಶವಗಳು ಬಿದ್ದಿರುವುದು ಮತ್ತು ಬಿಎಲ್‌ಎ ಹೋರಾಟಗಾರರು ಪಾಕ್ ಸೇನೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಪ್ರದರ್ಶಿಸುತ್ತಿರುವುದು ಕಂಡುಬರುತ್ತದೆ.
ಸುರಾಬ್‌ನಲ್ಲಿ ಎರಡನೇ ದಾಳಿ
ಇದಾದ ಬೆನ್ನಲ್ಲೇ ಬಲೂಚಿಸ್ತಾನದ ಸುರಾಬ್‌ನ ಹಾಜಿಕಾ ಎಂಬಲ್ಲಿ ಬಿಎಲ್‌ಎ ನ ಮತ್ತೊಂದು ವಿಶೇಷ ಪಡೆ ‘STOS’ ರಿಮೋಟ್ ಕಂಟ್ರೋಲ್ ಬಾಂಬ್ ಮೂಲಕ ಮಿಲಿಟರಿ ವಾಹನವೊಂದನ್ನು ಉಡಾಯಿಸಿದೆ. ಈ ಸ್ಫೋಟದಲ್ಲಿ 7 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸತ್ಯ ಮುಚ್ಚಿಡಲು ಯತ್ನಿಸುತ್ತಿದೆಯೇ ಪಾಕ್ ಸೇನೆ?
ಪಾಕಿಸ್ತಾನ ಸರ್ಕಾರ ಅಥವಾ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಈ ದಾಳಿಯ ಬಗ್ಗೆ ಯಾವುದೇ ಅಧಿಕೃತ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಸ್ಥಳೀಯ ಪತ್ರಕರ್ತರು ಹಂಚಿಕೊಂಡಿರುವ ವಿಡಿಯೋಗಳ ಪ್ರಕಾರ, ಮೃತಪಟ್ಟ ಸೈನಿಕರ ಶವಗಳನ್ನು ತಡರಾತ್ರಿಯ ಕತ್ತಲಲ್ಲೇ ರಹಸ್ಯವಾಗಿ ಅವರ ಕುಟುಂಬಗಳಿಗೆ ರವಾನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪಾಕ್ ಸೇನೆಯಿಂದ ಪ್ರತಿದಾಳಿ ಸ್ಕೆಚ್
ಈ ಭೀಕರ ದಾಳಿಯಿಂದ ಕಂಗೆಟ್ಟಿರುವ ಪಾಕಿಸ್ತಾನಿ ಸೇನೆಯು ಮಸ್ತುಂಗ್, ಸಿಬಿ, ಕ್ವೆಟಾ ಮತ್ತು ಕಲಾತ್ ಜಿಲ್ಲೆಗಳಲ್ಲಿ ಸರ್ಚ್ ಆಪರೇಷನ್ ಆರಂಭಿಸಿದೆ. ಈ ದಾಳಿಗಳ ವೇಳೆ ಬಿಎಲ್‌ಎ ಮತ್ತು ಟಿಟಿಪಿ ಸಂಘಟನೆಗೆ ಸೇರಿದ ಸುಮಾರು 50 ಹೋರಾಟಗಾರರನ್ನು ಹೊಡೆದುರುಳಿಸಿರುವುದಾಗಿ ಪಾಕ್ ಸೇನೆ ಹೇಳಿಕೊಂಡಿದೆ.
ಇದನ್ನೂ ಓದಿ:
ಏನಿದು ಬಲೂಚ್ ಸಂಘರ್ಷ?
ಬಲೂಚಿಸ್ತಾನವು ಪಾಕಿಸ್ತಾನದ ಅತ್ಯಂತ ದೊಡ್ಡ ಪ್ರಾಂತ್ಯವಾಗಿದ್ದರೂ, ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕ್ ಸರ್ಕಾರ ಮತ್ತು ಚೀನಾ ಸೇರಿ ಲೂಟಿ ಮಾಡುತ್ತಿವೆ ಎಂಬುದು ಇಲ್ಲಿನ ಜನರ ಪ್ರಮುಖ ಆರೋಪ. ಇದರೊಂದಿಗೆ, ಪಾಕ್ ಸೇನೆಯು ಬಲೂಚ್ ರಾಜಕೀಯ ಕಾರ್ಯಕರ್ತರನ್ನು ಮತ್ತು ಸಾಮಾನ್ಯ ಜನರನ್ನು ಅಕ್ರಮವಾಗಿ ಅಪಹರಿಸಿ ಕಾಣೆಯಾಗುವಂತೆ ಮಾಡುತ್ತಿದೆ ಎಂದು ಬಿಎಲ್‌ಎ ಆರೋಪಿಸುತ್ತಿದೆ. ಇದೇ ಕಾರಣಕ್ಕಾಗಿ ಬಲೂಚ್ ಸಂಘಟನೆಗಳು ಪಾಕಿಸ್ತಾನದಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ದಶಕಗಳಿಂದ ಸಶಸ್ತ್ರ ಹೋರಾಟ ನಡೆಸುತ್ತಿವೆ.



