September 5, 2026
Saturday, September 5, 2026
spot_img

ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದನೆ: ಚನ್ನಪಟ್ಟಣದಲ್ಲಿ ‘ಪ್ರಜಾಸೇವೆ’ಗೆ ಚಾಲನೆ

ಹೊಸದಿಗಂತ ವರದಿ ರಾಮನಗರ:

ಜನ ಸಾಮಾನ್ಯರ ಕಷ್ಟ-ಸುಖಗಳನ್ನು ಅರ್ಥ ಮಾಡಿಕೊಂಡು ಅವರ ಕುಂದುಕೊರತೆಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಸರಿಯಾದ ಸಮಯದಲ್ಲಿ ಸೂಕ್ತವಾಗಿ ಬಗೆಹರಿಸುವ ಉದ್ದೇಶದ ವಿಶಿಷ್ಟ-ವಿಭಿನ್ನ ಕಾರ್ಯಕ್ರಮವೇ ಪ್ರಜಾಸೇವಾ ಆಂದೋಲನಾ ಸಭೆ ಎಂದು ಪೌರಾಡಳಿತ ಸಚಿವರೂ ಆದ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ಹೇಳಿದರು.

ಚನ್ನಪಟ್ಟಣ ಟೌನಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಚೊಚ್ಚಲ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಮಾನ್ಯ ಜನರ ನೆಮ್ಮದಿಗಾಗಿ ಜನರ ಬಾಗಿಲಿಗೆ ಆಡಳಿತ ತಲುಪಿಸುವ ಆಶಯದೊಂದಿಗೆ ಮಾನ್ಯ ಮುಖ್ಯಮಂತ್ರಿಗಳು ಆಲೋಚಿಸಿ, ಸದುದ್ದೇಶದಿಂದ ಪ್ರಾರಂಭಿಸಲಾಗುತ್ತಿರುವ ಈ ಪ್ರಜಾಸೇವೆ ಆಂದೋಲನಾ ಸಭೆಯ ಯಶಸ್ವಿಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕೆಂದು ಹೇಳಿದರು.

ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಎಂಬ ಉದ್ದೇಶದಲ್ಲಿ ಪ್ರಜಾಸೇವೆ ಇಲಾಖೆಯ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಈ ಕಾರ್ಯಕ್ರಮ ಕಾಟಾಚಾರದ ಕಾರ್ಯಕ್ರಮವಲ್ಲ. ಸರ್ಕಾರದ ಬದ್ಧತೆಯನ್ನು ಸಾರ್ವಜನಿಕರಿಗೆ ತಿಳಿಸುವ ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಜಿಪಿಆರ್‌ಎಸ್ ಪೋರ್ಟಲ್‌ನಲ್ಲಿ ಅರ್ಜಿ ಹಾಕಿ

ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಜಿಪಿಆರ್‌ಎಸ್ ಪೋರ್ಟಲ್‌ನಲ್ಲಿ ನೇರವಾಗಿ ಅರ್ಜಿ ಮೂಲಕ ತಿಳಿಸಬಹುದು, ಇಲ್ಲದಿದ್ದಲ್ಲಿ ಮೊದಲನೇ ಹಾಗೂ ಮೂರನೇ ಶನಿವಾರದಂದು ತಾಲ್ಲೂಕು ಮಟ್ಟದಲ್ಲಿ ನಡೆಯಲಿರುವ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಹೋಬಳಿ ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ನಡೆಯಲಿರುವ ಪ್ರಜಾಸೇವೆ ಆಂದೋಲನಾ ಸಭೆಯಲ್ಲಿ ಕುಂದುಕೊರತೆ ಅಹವಾಲುಗಳ ಅರ್ಜಿ ಸಲ್ಲಿಸಬಹುದು. ಈ ಅರ್ಜಿಗಳಿಗೆ ಹಿಂಬರಹ ನೀಡಲಾಗುತ್ತದೆ. ಅರ್ಜಿ ಪರಿಶೀಲನೆಯ ಹಂತವನ್ನು ಜನರು ಪರಿಶೀಲಿಸಬಹುದಾಗಿದೆ ಎಂದರು.

ಇಲಾಖಾವಾರು ಸುಲಲಿತವಾಗಿ ಸಮಸ್ಯೆಗಳನ್ನು ಒಳಗೊಂಡ ಅರ್ಜಿಗಳ ಪರಿಶೀಲನೆ ನಡೆಸಿ ಬಗೆಹರಿಸಲಾಗುತ್ತದೆ. ಇದರ ಮೇಲ್ವಿಚಾರಣೆ ಹಾಗೂ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನಡೆಸಲಿದ್ದಾರೆ. ತಾಲ್ಲೂಕು ಕಚೇರಿಗಳಲ್ಲಿ, ಸರ್ಕಾರದ ಕುರಿತು ಜನರ ಬಾಯಲ್ಲಿ ಒಳ್ಳೆ ಮಾತುಗಳು ಬಂದಾಗ ಮಾತ್ರ ಆ ಸರ್ಕಾರ ಉತ್ತಮ ಸರ್ಕಾರ ಎಂದಾಗುತ್ತದೆ ಎಂದು ಕರ್ನಾಟಕ ವಿಧಾನಸಭೆಯ ಮಾಜಿ ಅಧ್ಯಕ್ಷರಾದ ಕೃಷ್ಣ ಅವರು ಹೇಳುತ್ತಿದ್ದರು, ಅದರಂತೆ ಅರ್ಹ ಫಲಾನುಭವಿಗಳಿಗೆ, ಬಡವರಿಗೆ ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ತಲುಪಿಸುವ ಮೂಲಕ ಉತ್ತಮ ಸರ್ಕಾರವಾಗಿಸೋಣ ಎಂದರು.

ಗ್ಯಾರಂಟಿಯಲ್ಲಿ ಸಮಸ್ಯೆಗಳಿದ್ದರೆ ಅರ್ಜಿ ಹಾಕಿ

ಅನೇಕ ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಮುಂದುವರೆಸಲು ಸಾಧ್ಯವಾಗಿಲ್ಲ. ನಮ್ಮ ರಾಜ್ಯ ಸರ್ಕಾರವು ಗ್ಯಾರಂಟಿ ಸೌಲಭ್ಯಗಳನ್ನು ನೀಡುತ್ತಿದೆ. ಗ್ಯಾರಂಟಿ ಸೌಲಭ್ಯಗಳ ವಿತರಣೆಯಲ್ಲೂ ಸಮಸ್ಯೆಗಳಿದ್ದಲ್ಲಿ ಪ್ರಜಾಸೇವೆ ಆಂದೋಲನದಲ್ಲಿ ಅರ್ಜಿ ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದರು.

ಪ್ರಜಾಸೇವೆ ಆಂದೋಲನವು ನಿರಂತರವಾಗಿ ಸಮಸ್ಯೆ ಬಗೆಹರಿಸುವ ಕಾರ್ಯಕ್ರಮವಾಗಿದೆ. ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸುವುದಾಗಿದೆ. ಸರ್ಕಾರದ ಬದ್ದತೆಯೊಂದಿಗೆ ಪ್ರಾರಂಭಿಸಲಾಗಿರುವ ಈ ಕಾರ್ಯಕ್ರಮದ ಮೂಲಕ ಧ್ವನಿಯಿಲ್ಲದವರಿಗೆ ಧ್ವನಿ ನೀಡುವ ಕೆಲಸ ಮಾಡೋಣ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೋಳುವ ಮೂಲಕ ಪ್ರಜಾಸೇವೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿ

ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿ, ಪ್ರಜಾಸೇವಾ ಆಂದೋಲನಾ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ, ಸಾರ್ವಜನಿಕರ ಸಮಸ್ಯೆಗಳನ್ನು ನೋಂದಾಯಿಸಿಕೊಂಡು ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ, ಎಲ್ಲಾ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ನೀಡಿದಂತಾಗುತ್ತದೆ ಎಂದರು.

ಜನಸಾಮಾನ್ಯರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಬಗೆಹರಿಸಬೇಕು. ಸರ್ಕಾರದ ಯೋಜನೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಬಗೆಹರಿಸುತ್ತಾರೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಿದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಇದನ್ನೂ ಓದಿ:

ಸರ್ಕಾರದ ಆದೇಶದಂತೆ ಮೊದಲನೇ ಹಾಗೂ ಮೂರನೇ ಶನಿವಾರ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಚನ್ನಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ, ಚನ್ನಪಟ್ಟಣ ನಗರಕ್ಕೆ ಯುಜಿಡಿಯಾಗಿದೆ ಅದರ ಕೆಲಸ ಪ್ರಾರಂಭಿಸಬೇಕು. ಚನ್ನಪಟ್ಟಣ ನಗರ ಜನತೆಗೆ ಕುಡಿಯುವ ನೀರಿನ ಸರಬರಾಜಿಗೆ ಸುಮಾರು 200 ಕೋಟಿ ರೂ.ಗಳ ವೆಚ್ಚದಲ್ಲಿ ಕಣ್ವ ಜಲಾಶಯದಿಂದ ಲಿಫ್ಟ್ ಇರಿಗೇಷನ್ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ. ರಾಜು, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಉಪಾಧ್ಯಕ್ಷ ಗಂಗಾಧರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜ್ ಗಾಣಕಲ್, ಚನ್ನಪಟ್ಟಣ ನಗರಸಭೆ ಅಧ್ಯಕ್ಷ ನಾಗೇಶ್, ಚನ್ನಪಟ್ಟಣ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಇದ್ದರು.

ವೇದಿಕೆಯಲ್ಲಿಯೇ ಅಹವಾಲು ಸ್ವೀಕರಿಸಿದ ಸಚಿವರು

ಪ್ರಜಾಸೇವೆ ಆಂದೋಲನ ಸಭೆಯ ಅಂಗವಾಗಿ ಸಾರ್ವಜನಿಕರು, ರೈತರು ಸಲ್ಲಿಸಿದ ಅಹವಾಲುಗಳನ್ನು ವೇದಿಕೆಯಲ್ಲಿಯೇ ಸ್ವೀಕರಿಸಿದ ಸಚಿವರಾದ ಎಚ್.ಸಿ. ಬಾಲಕೃಷ್ಣ ಹಾಗೂ ಶಾಸಕರಾದ ಸಿ.ಪಿ. ಯೋಗೇಶ್ವರ್ ಅವರು ಸ್ಥಳದಲ್ಲಿಯೇ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾಸೇವೆ ಆಂದೋಲನದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಸಾರ್ವಜನಿಕರು ಹಾಗೂ ರೈತರಿಂದ ಕುಂದುಕೊರತೆ ಹಾಗೂ ಅಹವಾಲುಗಳನ್ನು ಆಲಿಸಲು ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ 26 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಅಲ್ಲಿ ಕಂಪ್ಯೂಟರ್, ಪ್ರಿಂಟರ್‌ಗಳು, ಅರ್ಜಿಗಳು ಸೇರಿದಂತೆ ವಿವಿಧ ಪರಿಕರಗಳನ್ನು ಒದಗಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಹಾಗೂ ಕುಂದುಕೊರತೆಗಳನ್ನು ಸಲ್ಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !