September 5, 2026
Saturday, September 5, 2026
spot_img

‘SRCC ಅಂದ್ರೇನೇ ಒಂದು ಫ್ಲೆಕ್ಸ್’: Gen Z ಭಾಷೆಯಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಹೊಗಳಿದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ (SRCC) ಈಗ ಶತಮಾನೋತ್ಸವವನ್ನು ಪೂರೈಸಿದ್ದು ಈ ಸಂದರ್ಭದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ Gen Z ಶೈಲಿಯಲ್ಲೇ ಮಾತುಕತೆ ನಡೆಸಿ ಗಮನ ಸೆಳೆದರು.

Gen Z ಗಳು ಬಹಳಷ್ಟು ಸಲ ಬಳಸುವ ‘OG’ ಮತ್ತು ‘ಫ್ಲೆಕ್ಸ್’ ಸೇರಿದಂತೆ ಹಲವು ಪದಗಳನ್ನು ಬಳಸಿ ವಿದ್ಯಾರ್ಥಿಗಳ ಹೃದಯಗೆದ್ದರು.

ಧೂಮ್ ತೋ ಮಚಾಯೀ ಹೈ

ಯುವ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “Gen Z ಭಾಷೆಯಲ್ಲಿ ಹೇಳುವುದಾದರೆ, ಅವರು OG” ಎಂದು SRCCಯ ಹಳೆಯ ವಿದ್ಯಾರ್ಥಿಗಳನ್ನು ಉಲ್ಲೇಖಿಸಿದರು. ವಿವಿಧ ಕ್ಷೇತ್ರಗಳಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮಾಡಿರುವ ಸಾಧನೆಯನ್ನು ಶ್ಲಾಘಿಸಿದ ಅವರು, “ಧುರಂಧರ ನಾ ಹೋ, ಲೇಕಿನ್ ಧೂಮ್ ತೋ ಮಚಾಯೀ ಹೈ” ಎಂದು ಹೇಳುವ ಮೂಲಕ ತಮ್ಮದೇ ಶೈಲಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

SRCCಯ 100 ವರ್ಷಗಳ ಪಯಣವನ್ನು ಸ್ಮರಿಸಿದ ಮೋದಿ, ದೆಹಲಿಯ ದರಿಯಾಗಂಜ್‌ನ ಸಣ್ಣ ಆರಂಭದಿಂದ ಇಂದು ದೇಶದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವ ಕಾಲೇಜಿನ ಸಾಧನೆಯನ್ನು ಉಲ್ಲೇಖಿಸಿದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಯಾರಾದರೂ “ಯಾವ ಕಾಲೇಜು?” ಎಂದು ಕೇಳಿದಾಗ “SRCC” ಎಂದು ಹೇಳುವುದೇ ಒಂದು ರೀತಿಯ ‘ಫ್ಲೆಕ್ಸ್’ ಎಂದರು.

ಸವಾಲುಗಳ ನಡುವೆಯೂ ಅವಕಾಶ ಹುಡುಕಿ

ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ನೆನಪಿಸಿಕೊಂಡ ಪ್ರಧಾನಿ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಗೂ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಅವರೊಂದಿಗೆ ತಾವು ಕೆಲಸ ಮಾಡಿರುವುದನ್ನೂ ಸ್ಮರಿಸಿದರು. ಇದೇ ವೇಳೆ 2013ರಲ್ಲಿ SRCCಯಲ್ಲಿ ತಾವು ನೀಡಿದ್ದ ಭಾಷಣವನ್ನೂ ಮೋದಿ ನೆನಪಿಸಿಕೊಂಡರು. ಆಗ ಹೇಳಿದ್ದ “ಗ್ಲಾಸ್ ಅರ್ಧ ಖಾಲಿಯಲ್ಲ, ಅರ್ಧ ತುಂಬಿದೆ” ಎಂಬ ಉದಾಹರಣೆಯನ್ನು ಮತ್ತೆ ಉಲ್ಲೇಖಿಸಿ, ಸವಾಲುಗಳ ನಡುವೆಯೂ ಅವಕಾಶಗಳನ್ನು ನೋಡುವ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು SRCC ಉತ್ತಮವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದಲ್ಲಿ ಉನ್ನತ ಶಿಕ್ಷಣದ ವ್ಯಾಪ್ತಿ ಹೆಚ್ಚುತ್ತಿರುವುದನ್ನೂ ಅವರು ಉಲ್ಲೇಖಿಸಿದರು.

ಶತಮಾನೋತ್ಸವ ಕೇವಲ SRCCಯ ಗತಕಾಲವನ್ನು ಸ್ಮರಿಸುವ ಕಾರ್ಯಕ್ರಮವಲ್ಲ, ಮುಂದಿನ ಪೀಳಿಗೆ ದೇಶಕ್ಕಾಗಿ ದೊಡ್ಡ ಕನಸು ಕಾಣಲು ಮತ್ತು ಹೊಸತನದತ್ತ ಹೆಜ್ಜೆ ಇಡಲು ಪ್ರೇರಣೆಯಾಗಬೇಕು ಎಂಬ ಸಂದೇಶವನ್ನು ಮೋದಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !